ಮುನಿಸು ಮರೆತು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಬಂದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ, ತಣ್ಣಗಾಗದ ಪರಂ ಸಿಟ್ಟು

ಬೆಂಗಳೂರುಸಚಿವ ಸ್ಥಾನ ಮತ್ತು ಖಾತೆ ಹಂಚಿಕೆ ವಿಚಾರ ಕಾಂಗ್ರೆಸ್​ನಲ್ಲಿ ಇನ್ನು ಬೂದಿ ಮುಚ್ಚಿದ ಕೆಂಡದ ವಾತಾವರಣವಿದೆ. ಗೃಹ ಖಾತೆ ಕೈ ತಪ್ಪಿದ್ದಕ್ಕೆ ಪರಮೇಶ್ವರ್​ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವುದು ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್​ ಸಂಸ್ಥಾಪನಾ ದಿನಾಚರಣೆಯಿಂದ ಬಹಿರಂಗಗೊಂಡಿದೆ. ಇನ್ನು ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ಎಚ್​.ಕೆ.ಪಾಟೀಲ್ ತಮ್ಮ ಮುನಿಸು ಮರೆತು ಕಾರ್ಯಕ್ರಮಕ್ಕೆ ಹಾಜರಾದರು.

ಗೃಹ ಖಾತೆ ಉಳಿಸಿಕೊಳ್ಳಲು ಪರಮೇಶ್ವರ್ ಕೊನೆವರೆಗೂ ನಡೆಸಿದ ಹೋರಾಟ ಕೊನೆಗೊಂಡಿದೆ. ಪರಮೇಶ್ವರ್ ಮನವಿಗೆ ಸ್ಪಂದಿಸದ ಹೈ ಕಮಾಂಡ್, ಗೃಹ ಖಾತೆಯನ್ನು ಎಂ ಬಿ ಪಾಟೀಲ್ ಗೆ ನೀಡಿದೆ. ಡಿಸಿಎಂ ಜೊತೆಗೆ ಗೃಹ ಇಲಾಖೆ ಇದ್ರೆನೇ ಬೆಲೆ ಮತ್ತು ಗೌರವ. ಇದೀಗ ಗೃಹ ಇಲಾಖೆ ಇಲ್ಲಾಂದ್ರೆ ಡಿಸಿಎಂ ಹುದ್ದೆ ಇಟ್ಕೊಂಡು ಏನ್ಮಾಡಲಿ ಅಂತಾ ಪರಮೇಶ್ವರ್ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ಪರಮೇಶ್ವರ್​ ಇಂದು ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಗೈರಾಗಿದ್ದಾರೆ.

ಇನ್ನು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಹೆಚ್.ಕೆ.ಪಾಟೀಲ್ ಹಾಗೂ ರಾಮಲಿಂಗಾ ರೆಡ್ಡಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಪಕ್ಷದ ಮೇಲೆ ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಜಗಜ್ಜಾಹೀರು ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಹನುಮಂತಪ್ಪ ಅವರು ಪಕ್ಷದ ಮುಖಂಡರ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.  ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಆದರೆ ಗೆದ್ದವರಿಗೆ ಅಧಿಕಾರ ಸಿಕ್ಕಿಲ್ಲ, ಅಧಿಕಾರ ಸಿಕ್ಕವರಿಗೆ ಖಾತೆಗಳು ಸಮಾಧಾನ ತಂದಿಲ್ಲ. ನಮ್ಮಲ್ಲಿ ಕಾರ್ಯಕರ್ತರು ಇಲ್ಲ, ವಾಲೆಂಟಿಯರ್ಸ್ ಇಲ್ಲ. ಇನ್ನೂ ಕೂಡ ನಾವು ಕುರ್ಚಿಗಾಗಿ ಹುಡುಕಾಟ ನಡೆಸುವ ಭಯಾನಕ ಸ್ಥಿತಿಯಲ್ಲಿದ್ದೇವೆ. ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಧ್ವನಿ ಎತ್ತುತ್ತಿಲ್ಲ. ಕಾರ್ಯಕರ್ತರಿಗೆ ಹಿರಿಯರು ಸೂಚನೆ ಕೊಡಬೇಕು, ಆದರೆ ಹಿರಿಯರಿಂದ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹನುಮಂತಪ್ಪ ಅವರ ನೇರ ಮಾತುಗಳಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಸೇರಿದಂತೆ ವೇದಿಕೆ ಮೇಲಿದ್ದ ಮುಖಂಡರು  ಮುಜುಗರಕ್ಕೀಡಾದರು.

ಮಾಧ್ಯಮದವರ ಮೇಲೆ ಗುಂಡೂರಾವ್ ಕಿಡಿ
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ವಾಗ್ವಾದ ನಡೆಯಿತು ಎಂದು ಸುದ್ದಿ ಮಾಡಲಾಗಿದೆ. ಆದರೆ ಅಲ್ಲಿ ಆ ತರಹದ ಘಟನೆಯೇ ನಡೆಯಲಿಲ್ಲ. ಮಾದ್ಯಮಗಳಲ್ಲಿ ದೊಡ್ಡ ವಾಗ್ವಾದ ನಡೆಯಿತು ಅಂತ ಬಂದಿದೆ. ಪತ್ರಿಕೆಗಳ ಮೊದಲ ಪುಟದಲ್ಲಿ ಹೀಗೆ ವರದಿ ಮಾಡಲಾಯಿತು. ಟಿವಿಯಲ್ಲಿ ಬಂದರೆ ಬಿಡಿ ಜನ ನಂಬುವುದಿಲ್ಲ. ಆದರೆ ಪತ್ರಿಕೆಯಲ್ಲಿ ಬಂದರೆ ಸ್ವಲ್ಪ ನಂಬುತ್ತಾರೆ. ಅದೆಲ್ಲಾ ಸುಳ್ಳು ಎಂದು ದಿನೇಶ್​ ಗುಂಡೂರಾವ್​ ಮಾಧ್ಯಮದವರ ಮೇಲೆ ಕಿಡಿ ಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ