ಬಗೆಹರಿದ ಸಚಿವರ ಖಾತೆ ಹಂಚಿಕೆ ಬಿಕ್ಕಟ್ಟು: ಪರಮೇಶ್ವರ್ ರಿಂದ ಕೈತಪ್ಪಿದ ಗೃಹ ಖಾತೆ ಎಂ.ಬಿ.ಪಾಟೀಲ್ ಗೆ ನೀಡಲಾಗಿದೆ

ಬೆಂಗಳೂರು: ಸಚಿವ ಸಂಪುಟ ಪುನರಾಚನೆಯ ನಂತರ ತೀವ್ರ ಕಗ್ಗಾಂಟಾಗಿ ಪರಿಣಮಿಸಿದ್ದ ಸಚಿವರ ಖಾತೆ ಬಿಕ್ಕಟ್ಟು ಕೊನೆಗೂ ಬಗೆಹರಿದಿದ್ದು, ಗೃಹ ಖಾತೆ ಪರಮೇಶ್ವರ್ ಕೈ ತಪ್ಪಿದೆ.

ತಮಗೆ ಅತ್ಯಂತ ಲಾಭದ ಖಾತೆಗಳೇ ಬೇಕು ಎಂದು ಸಚಿವರು ಪಟ್ಟು ಹಿಡಿದಿದ್ದರಿಂದ ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶ ಮಾಡಬೇಕಾಯಿತು.

ಗುರುವಾರ ಸಂಜೆ ರಾಹುಲ್ ಗಾಂಧಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಮೂಲಕ ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೃಹ ಖಾತೆ ಬಿಟ್ಟು ಕೊಡಲು ಹಿಂದೇಟು ಹಾಕಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೆ ಭಾರೀ ಹಿನ್ನಡೆಯಾಗಿದೆ‌. ಅಚ್ಚರಿಯ ಬೆಳವಣಿಗೆಯಲ್ಲಿ ಗೃಹ ಖಾತೆಯನ್ನು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್ ಗೆ ನೀಡಲಾಗಿದೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಮೇಲುಗೈ ಸಾಧಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಖಾತೆ ಹಂಚಿಕೆಯಲ್ಲೂ ತಮ್ಮ ಪ್ರಭಾವ ಏನೆಂಬುದನ್ನು ಸಾಬೀತು ಮಾಡಿದ್ದಾರೆ.

ಸದ್ಯಕ್ಕೆ ಪರಮೇಶ್ವರ್ ಅವರನ್ನು ಬೆಂಗಳೂರು ಅಭಿವೃದ್ಧಿ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸೀಮಿತಗೊಳಿಸಲಾಗಿದೆ. ಇನ್ನು ಸಿದ್ದರಾಮಯ್ಯ ತಮ್ಮ ಆಪ್ತರಾದ ಎಂ.ಟಿ.ಬಿ.ನಾಗರಾಜ್ ಗೆ ವಸತಿ, ಮತ್ತೊರ್ವ ಆಪ್ತ ಸತೀಶ್ ಜಾರಕಿಹೊಳಿಗೆ ಅರಣ್ಯ, ಶಿವಳ್ಳಿಗೆ ಪೌರಡಳಿತ, ತುಕರಾಂಗೆ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನೀಡಲಾಗಿದೆ.
ಇದೇ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿದ್ದ ರಹೀಂಖಾನ್ ಯುವಜನ ಕ್ರೀಡೆ ಹಾಗೂ ಅರ್ .ಬಿ.ತಿಮ್ಮಾಪುರಗೆ ಕೌಶಲ್ಯ ಅಭಿವೃದ್ಧಿ ಮತ್ತು ಟಿ.ಪಿ. ಪರಮೇಶ್ವರ್ ನಾಯ್ಕ ಗೆ ಐ.ಟಿ.ಬಿ.ಟಿ ಜೊತೆಗೆ ಮುಜರಾಯಿ ಹೊಣೆಗಾರಿಕೆ ನೀಡಲಾಗಿದೆ.

ಇನ್ನು ಸಮ್ಮಿಶ್ರ ಸರ್ಕಾರದ ಟ್ರಬಲ್ ಶ್ಯೂಟರ್ ಎಂದೇ ಕರೆಯಲಾಗುತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೂಡಾ ಈ ಭಾರಿ ಹಿನ್ನಡೆ ಅನುಭವಿಸಿದ್ದಾರೆ.
ತಮ್ಮ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಬಿಟ್ಟು ಕೊಡಲು ಈ ಮೊದಲು ಹಿಂದೇಟು ಹಾಕಿದ್ದರು. ಜಲಸಂಪನ್ಮೂಲ ಖಾತೆಯ ಜೊತೆಗೆ ವೈದ್ಯಕೀಯ ಶಿಕ್ಷಣ ಖಾತೆಯೂ ಬೇಕೆಂದು ಪಟ್ಡು ಹಿಡಿದಿದ್ದರು.

ಬುಧವಾರ ನಡೆದ ಸಭೆಯಲ್ಲಿ ನನ್ನ ಬಳಿ ಇರುವ ಖಾತೆಯನ್ನು ಕಿತ್ತುಕೊಳ್ಳುವುದಾದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.
ಆದರೆ, ಇದಕ್ಕೆ ಹೈ ಕಮಾಂಡ್ ಸೊಪ್ಪು ಹಾಕಿಲ್ಲ. ಖಾತೆಗಳ ಹಂಚಿಕೆಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿರುವುದರಿಂದ ಮುಂದೆ ಇದು ಕಾಂಗ್ರೆಸ್ ನಲ್ಲಿ ಇನ್ಯಾವ ತಿರುವು ಪಡೆದುಕೊಳ್ಳಲಿದಿಯೇ ಎಂಬುದನ್ನು ಕಾದು ನೋಡಬೇಕು.

ರಾಹುಲ್ ಗಾಂಧಿ ಅವರು ಖಾತೆಗಳ ಪಟ್ಟಿಗೆ ಸಹಿ ಹಾಕಿದ್ದು,‌ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿ ಕೊಡಬಹುದು.

ಯಾವ ಸಚಿವರಿಗೆ ಯಾವ ಖಾತೆ:

1) ಎಂಬಿ ಪಾಟೀಲ್: ಗೃಹ ಖಾತೆ, ಆರ್​ಡಿಪಿಆರ್ ಖಾತೆ
2) ಆರ್.ಬಿ. ತಿಮ್ಮಾಪುರ: ಕೌಶಲ್ಯಾಭಿವೃದ್ಧಿ ಖಾತೆ
3) ಎಂಟಿಬಿ ನಾಗರಾಜ್: ವಸತಿ ಖಾತೆ
4) ಪರಮೇಶ್ವರ್ ನಾಯ್ಕ್:​ ಮುಜರಾಯಿ, ಐಟಿಬಿಟಿ ಖಾತೆ
5) ಸಿಎಸ್ ಶಿವಳ್ಳಿ: ಪೌರಾಡಳಿತ, ಬಂದರು ಖಾತೆ
6) ರಹೀಮ್ ಖಾನ್: ಯುವಜನ ಸೇವೆ ಮತ್ತು ಕ್ರೀಡೆ ಖಾತೆ
7) ಸತೀಶ್ ಜಾರಕಿಹೊಳಿ: ಅರಣ್ಯ ಖಾತೆ
8) ಇ. ತುಕಾರಾಮ್: ವೈದ್ಯಕೀಯ ಶಿಕ್ಷಣ ಖಾತೆ

JDS-Congress alliance government,Cabinet Expansion,MB Patil,Home Minister,G.Parameshwara

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ