ಸಂಸತ್ ಚಳಿಗಾಲದ ಅಧಿವೇಶನ: ಲೋಕಸಭಾ ಕಲಾಪ ಡಿ.27ಕ್ಕೆ ಮುಂದೂಡಿಕೆ

ನವದೆಹಲಿ: ಮೇಕೆದಾಟು ಹಾಗೂ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸೇರಿದಂತೆ ಹಲವಾರು ವಿಚಾರಗಳು ಇಂದೂ ಕೂಡ ಸಂಸತ್ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ತೀವ್ರ ಕೋಲಾಹಲ-ಗದ್ದಲ ಹಿನ್ನಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಲೋಕಸಭೆ ಕಲಾಪವನ್ನು ಡಿಸೆಂಬರ್ 27ರವರೆಗೆ ಮುಂದೂಡಿದ್ದಾರೆ.

ಇಂದು ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಐಎಡಿಎಂಕೆ, ಟಿಡಿಪಿ ಮತ್ತು ಕಾಂಗ್ರೆಸ್ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು. ರಫೇಲ್ ಫೈಟರ್ ಜೆಟ್ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸದಸ್ಯರು ಬಿಗಿಪಟ್ಟು ಮುಂದುವರಿಸಿದರು. ಕರ್ನಾಟಕದ ಮೇಕೆದಾಟು ಅಣೆಕಟ್ಟು ಪ್ರಸ್ತಾವನೆ ಮೂಲಕ ತಮಿಳುನಾಡಿನ ರೈತರಿಗೆ ಸಂಕಷ್ಟ ಪರಿಸ್ಥಿತಿ ಉಂಟುಮಾಡಿದೆ ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ಪ್ರತಿಭಟಿಸಿದರು.

ಆಂಧ್ರ ಪ್ರದೇಶಕ್ಕೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಟಿಡಿಪಿ ಸದಸ್ಯರು ಗದ್ದಲ ಮುಂದುವರಿಸಿದರು. ಪ್ರತಿಪಕ್ಷಗಳ ಸದಸ್ಯರು ಲೋಕಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ದಾವಿಸಿ ಘೋಷಣೆ ಕೂಗುತ್ತ ಧರಣಿ ನಡೆಸಿ ಕೋಲಾಹಲದ ವಾತಾವರಣ ಸೃಷ್ಟಿಸಿದರು. ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಲು ಯತ್ನಿಸಿದ ಸ್ಪೀಕರ್ ಸುಮಿತ್ರ ಮಹಾಜನ್ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು. ನಂತರ ಸದನ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರಿಯಿತು.ಈ ಹಿನ್ನಲೆಯಲ್ಲಿ ಸ್ಪೀಕರ್, ಕಲಾಪವನ್ನು ಡಿ.27ಕ್ಕೆ ಮುಂಡೂದಿದರು.

ಕ್ರಿಸ್ಮಸ್ ಹಿನ್ನಲೆಯಲ್ಲಿ ಡಿಸೆಂಬರ್ 24 ಮತ್ತು ಡಿಸೆಂಬರ್ 26ರಂದು ಕಲಾಪಕ್ಕೆ ರಜೆ ನೀಡಲಾಗಿದ್ದು, ಡಿಸೆಂಬರ್ 27ರಂದು ಮತ್ತೆ ಸಂಸತ್ ಕಲಾಪ ಆರಂಭವಾಗಲಿದೆ.

ಕ್ರಿಸ್ಮಸ್ ಗಾಗಿ ಡಿಸೆಂಬರ್ 24 ಮತ್ತು 26ರಂದು ಕಲಾಪಕ್ಕೆ ರಜೆ ನೀಡಬೇಕು ಎಂದು ಹಲವು ಸದಸ್ಯರು ಮನವಿ ಮಾಡಿಕೊಂಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘವಾಲ್ ಅವರು ತಿಳಿಸಿದರು.

ಇದೇ ವಿಷಯಗಳು ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದ್ದು, ರಫೇಲ್ ಮತ್ತು ಮೇಕೆದಾಟು ವಿವಾದಗಳನ್ನು ಕಾಂಗ್ರೆಸ್ ಮತ್ತು ಡಿಎಂಕೆ, ಎಐಎಡಿಎಂಕೆ ಸದಸ್ಯರು ಗದ್ದಲ ಸೃಷ್ಟಿಸಿದರು. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸದಸ್ಯರು ಬಿಗಿಪಟ್ಟು ಹಿಡಿದರು. ಇದೇ ವೇಳೆ ಆಡಳಿತ ಪಕ್ಷದ ಸದಸ್ಯರು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಫೇಲ್ ವಿಷಯದಲ್ಲಿ ರಾಹುಲ್‍ಗಾಂಧಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಸುಗಮ ಕಲಾಪ ನಡೆಯಲು ಅವಕಾಶ ನೀಡಿ ಎಂದು ಸಭಾಪತಿ ವೆಂಕಯ್ಯನಾಯ್ಡು ಪ್ರತಿಭಟನಾನಿರತ ಸದಸ್ಯರಲ್ಲಿ ಪುನರಾವರ್ತಿತ ಮನವಿ ಮಾಡಿದರು. ಆದರೆ, ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಮುಂದೂಡಲಾಯಿತು.

Parliament Winter Session,Lok sabha, Rajya Sabha, Adjourned

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ