ಬಿಎಂಟಿಸಿ ಬಸ್​ಗೆ ಇಬ್ಬರು ವಿದ್ಯಾರ್ಥಿಗಳು ಬಲಿ; 10 ಲಕ್ಷ ರೂ. ಪರಿಹಾರ ಘೋಷಿಸಿದ ಮೇಯರ್ ಗಂಗಾಂಬಿಕೆ

ಬೆಂಗಳೂರುಮೈಸೂರು ರಸ್ತೆ ಮೂಲಕ  ಮೆಜೆಸ್ಟಿಕ್​ಗೆ ಬರುತ್ತಿದ್ದ ಬಿಎಂಟಿಸಿ ಬಸ್​ ಗೋಪಾಲನ್​ ಮಾಲ್​ ಬಳಿ  ಬಸ್​ ಬ್ರೇಕ್​ ಫೇಲ್​ ಆಗಿದ್ದು, ಫುಟ್ ಪಾತ್ ​ಮೇಲೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡಿದೆ.

ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಕಿಲ್ಲರ್​ ಬಿಎಂಟಿಸಿ ಎಂದೇ ಕುಖ್ಯಾತಿ ಗಳಿಸಿದ್ದ ಬಸ್​ಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಮೈಸೂರು ರಸ್ತೆ ಮೂಲಕ ಮೆಜೆಸ್ಟಿಕ್​ಗೆ ಹೋಗುತ್ತಿದ್ದ ಬಸ್​ ಬ್ರೇಕ್​ಫೇಲ್​ ಆಗಿದ್ದರಿಂದ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಪಿಯುಸಿ ಓದುತ್ತಿದ್ದ ಚಂದ್ರಕಾಂತ್​ ಮತ್ತು ಯಧು​ ಕುಮಾರ್​ ಕಾಲೇಜಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಹಿಂಬದಿಯಿಂದ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ, ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಿಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬ್ರೇಕ್​ಫೇಲ್​ ಆಗಿದ್ದರಿಂದ ಇದ್ದಕ್ಕಿದ್ದಂತೆ ಫುಟ್​ಪಾತ್​ ಮೇಲೆ ಹತ್ತಿದ ಬಸ್​ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಈ ಘಟನೆ ಸಂಬಂಧ ಬಿಎಂಟಿಸಿ ಬಸ್ ಚಾಲಕನನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಟಿ ಮಾರ್ಕೆಟ್ ಬಳಿ ಫ್ಲೈಓವರ್​ ಕೆಳಗೆ ರಸ್ತೆ ತಡೆದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಯಾರದೋ ತಪ್ಪಿಗೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳದೂ ಕರುಣಾಜನಕ ಕತೆ:
ವಿಕ್ಟೋರಿಯಾ ಆಸ್ಪತ್ರೆ ಬಳಿ ಮೃತ ವಿದ್ಯಾರ್ಥಿಗಳ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು,ಸತ್ತ ಮಕ್ಕಳನ್ನು ಯಾರಾದರೂ ವಾಪಾಸ್​ ಕೊಡೋಕೆ ಸಾಧ್ಯವಿದೆಯಾ? ಎಂದು ಗೋಳಾಡುತ್ತಿದ್ದಾರೆ. ಸತ್ತ ಇಬ್ಬರು ವಿದ್ಯಾರ್ಥಿಗಳೂ ಬಹಳ ಬಡಕುಟುಂಬದಿಂದ ಬಂದವರಾಗಿದ್ದು, ಚಂದ್ರಕಾಂತ ಅವರ ತಾಯಿ ಮನೆ ಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದರು. ಬೆಳಗ್ಗೆ ಕಾಲೇಜಿಗೆ ಬರುತ್ತಿದ್ದ ಚಂದ್ರಕಾಂತ ಸಂಜೆ ಗೋಪಾಲನ್ ಮಾಲ್ ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ.ತಂದೆಯಿಲ್ಲದ ಚಂದ್ರಕಾಂತ ಮೂಲತಃ ಗುಲ್ಬರ್ಗದವರು.
ಯಧುಕುಮಾರ್ ಬೆಳಗ್ಗೆ ಪೇಪರ್ ಹಾಕಿ ನಂತರ ಕಾಲೇಜಿಗೆ ಹೋಗುತ್ತಿದ್ದ. ಇಂದು ಕೂಡಾ ಯಧುಕುಮಾರ್ ಬೆಳಗ್ಗೆ ಪೇಪರ್ ಹಾಕಿ ಕಾಲೇಜಿಗೆ ಬಂದಿದ್ದ. ಯಮಸ್ವರೂಪಿ ಬಸ್ ಇಬ್ಬರು ವಿದ್ಯಾರ್ಥಿಗಳನ್ನ ಬಲಿ ಪಡೆದುಕೊಂಡಿದೆ.

10 ಲಕ್ಷ ರೂ. ಪರಿಹಾರ ಘೋಷಣೆ:

ಬಿಎಂಟಿಸಿ ಬಸ್​ ಡಿಕ್ಕಿಯಾಗಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿರುವುದಕ್ಕೆ ಸಂತಾಪ ಸೂಚಿಸಿರುವ ಮೇಯರ್​ ಗಂಗಾಂಬಿಕೆ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮೃತ ವಿದ್ಯಾರ್ಥಿಗಳ ಮನೆಯಲ್ಲಿ ಬಹಳ ಬಡತನವಿದ್ದು, ಅವರಿಗೆ ಬೇಕಾದ ಎಲ್ಲ ರೀತಿಯ ಸಹಾಯ ನೀಡುವುದಾಗಿ ಮೇಯರ್​ ತಿಳಿಸಿದ್ದಾರೆ.

ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ರಸ್ತೆ ಸರಿಯಿಲ್ಲ. ರಸ್ತೆ ಸರಿ ಇಲ್ಲದ್ದರಿಂದ ಈ ಅವಘಡ ಉಂಟಾಗಿದೆ. ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಕೂಡಲೇ ಅದನ್ನ ಸರಿಪಡಿಸಬೇಕು. ಪುಟ್ ಪಾತ್ ಮೇಲೆ ಜಲ್ಲಿ‌ಕಲ್ಲು ಹಾಕಲಾಗಿದೆ. ಅದರಿಂದ ಪಾದಚಾರಿಗಳು ಓಡಾಡಲು ಅಗುತ್ತಿಲ್ಲ ಎಂದು ಮೇಯರ್ ಮುಂದೆ ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ರಸ್ತೆಯಲ್ಲಿರುವ ಸಮಸ್ಯೆಯನ್ನು ಸರಿಪಡಿಸುವ ಭರವಸೆ ನೀಡಿರುವ ಮೇಯರ್ ಗಂಗಾಬಿಕೆ ಕೂಡಲೇ ಬಿಬಿಎಂಪಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸರಿಪಡಿಸುವ ಭರವಸೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ