ಬೆಳಗಾವಿಯಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ ಆರಂಭ; ಬೆಂಗಳೂರಿನಲ್ಲೇ ಉಳಿದ ರಾಮಲಿಂಗಾರೆಡ್ಡಿ

ಬೆಳಗಾವಿ: ಸಚಿವ ಸಂಪುಟ ಸಭೆ ವಿಸ್ತರಣೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ಈ ಕುರಿತು ನಿರ್ಣಯ ಕೈಗೊಳ್ಳಲು ಕಾಂಗ್ರೆಸ್​ ಮುಂದೂಡಿದ್ದ ಶಾಸಕಾಂಗ ಸಭೆ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಿದೆ. ಸಭೆಗೆ ಕಾಂಗ್ರೆಸ್​ ಶಾಸಕರು ಆಗಮಿಸುತ್ತಿದ್ದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲೇ ಉಳಿಯುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯನ್ನು ನಿಗದಿಪಡಿಸಲಾಗಿದ್ದು, ಪ್ರತಿಯೊಬ್ಬ ಶಾಸಕರು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಎಷ್ಟು ಮಂದಿ ಶಾಸಕರು ಸಭೆಯಿಂದ ಹೊರಗುಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶಾಸಕರು ಅತೃಪ್ತಿ ವ್ಯಕ್ತಪಡಿಸಿದ್ದರು. ಅಲ್ಲದೇ ಸಂಪುಟ ವಿಸ್ತರಣೆಯಾಗದಿದ್ದರೆ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಬಂಡಾಯ ಸಾರಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಮ್ಮುಖದಲ್ಲಿ ಶಾಸಕರ ಸಭೆ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಸಭೆ ರದ್ದುಗೊಂಡಿತು.

ಈ ಹಿಂದಿನ ಸಭೆಯಲ್ಲಿ ಕುಮಾರಸ್ವಾಮಿ ಅವರಿಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.  ಆದರೆ, ಈ ಬಾರಿ ಕುಮಾರಸ್ವಾಮಿ ಅವರನ್ನು ಸಭೆಯಿಂದ ಕೈ ಬಿಡಲಾಗಿದೆ. ಕಾರಣ ಅವರು ತಿರುಪತಿ ಪ್ರವಾಸವಾಗಿದೆ. ಈಗಾಗಲೇ ತಿರುಪತಿ ಪ್ರವಾಸದ ಬಗ್ಗೆ ಕಾಂಗ್ರೆಸ್​ ನಾಯಕರಿಗೆ ಸಿಎಂ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಆಹ್ವಾನ ನೀಡಲಾಗಿಲ್ಲ ಎಂದು ನೆನ್ನೆ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸುವರ್ಣಸೌಧದಲ್ಲಿ ನಡೆಯಲಿರುವ  ಸಭೆಯಲ್ಲಿ ಕೇವಲ ಅಸಮಾಧಾನ, ಬಂಡಾಯದ ಬಗ್ಗೆ ಮಾತ್ರವಲ್ಲದೇ  ಶಾಸಕರ ಕ್ಷೇತ್ರಗಳಲ್ಲಿ ಅನುದಾನದ ಕೊರತೆ, ಎಲ್ಲ ಕೆಲಸಗಳು ಸ್ಥಗಿತಗೊಂಡಿರುವ ಬಗ್ಗೆ ಕೂಡ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ