ಮಾರಮ್ಮನ ದೇಗುಲದಲ್ಲಿ ವಿಷಯಾಯ್ತು ಪ್ರಸಾದ; ಸಾವಿನ ಸಂಖ್ಯೆ 11ಕ್ಕೆ, 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚಾಮರಾಜನಗರ: ಹನೂರು ಸಮೀಪದ ಸುಳ್ವಾಡಿ ಕಿಚ್ಚುಗುತಿ ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ ಪ್ರಕರಣದಲ್ಲಿ ಮಗು ಸಹಿತ 11 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದ ಗೋಪುರದ ಶಂಕುಸ್ಥಾಪನೆಯ ವೇಳೆ ಅನ್ನಸಂತರ್ಪಣೆಯ ಪ್ರಸಾದ ಸೇವಿಸಿದ ಜನರು ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇಗುಲದ ಆವರಣದಲ್ಲಿ ಪ್ರಸಾದ ಸೇವಿಸಿದ್ದ 60ಕ್ಕೂ ಹೆಚ್ಚು ಕಾಗೆಗಳು ಕೂಡ ಸಾವನ್ನಪ್ಪಿದೆ.

ಅಸ್ವಸ್ಥರ ಪೈಕಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ದಾಖಲಾಗಿದ್ದು, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆರೋಗ್ಯಾಧಿಕಾರಿ ಡಾ.ಪ್ರಸಾದ್, ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಸಿಎಂ ಸಾಂತ್ವನ:

ಚಾಮರಾಜನಗರ ಜಿಲ್ಲೆಯ ಸುಲ್ವಾಡಿ ಗ್ರಾಮದಲ್ಲಿ ಪ್ರಸಾದ ಸ್ವೀಕರಿಸಿ ಎಂಟು ಮಂದಿ ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದ ಸಿಎಂ, ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು. ಘಟನೆಯ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ನಂತರ ರಾತ್ರಿ ಮೈಸೂರಿಗೆ ಆಗಮಿಸಿದ ಸಿಎಂ, ಆಸ್ಪತ್ರೆಗೆ ತೆರಳಿ ಅಸ್ವಸ್ಥರನ್ನು ಮತ್ತು ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಾದ ಚಿನ್ನಪ್ಪಿ ಹಾಗೂ ಮಾದೇಶ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವರು ಎರಡು ದಿನಗಳ ಹಿಂದೆಯಷ್ಟೇ ದೇಗುಲ ಜಾಗದ ವಿಷಯವಾಗಿ ಪರಸ್ಪರ ಜಗಳವಾಡಿಕೊಂಡಿದ್ದರು.

ದೇಗುಲದ ಗೋಪುರ ಪೂಜೆಗೆ ಸೇರಿದ್ದರು
ಸುಳುವಾಡಿ ಗ್ರಾಮದ ಕಿಚ್‌ಕುತ್‌ ಮಾರಮ್ಮ ದೇವಸ್ಥಾನದಲ್ಲಿ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅಕ್ಕಪಕ್ಕದ ಗ್ರಾಮಗಳ ಜನರೂ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪೂಜೆಯ ಬಳಿಕ ಅನ್ನಸಂತರ್ಪಣೆಗಾಗಿ ಪಲಾವ್‌ ತಯಾರಿಸಲಾಗಿತ್ತು. ಇದನ್ನು ಸೇವಿಸಿದ ಕೆಲವರು ಅರ್ಧ ಗಂಟೆಯಲ್ಲಿಯೇ ದೇವಾಲಯದ ಸಮೀಪವೇ ಅಸ್ವಸ್ಥಗೊಂಡರು.

ತಲೆಸುತ್ತು ಬಂದು ಕೆಲವರು ವಾಂತಿ ಮಾಡಿಕೊಂಡರು. ಇನ್ನು ಕೆಲವರಿಗೆ ತಮ್ಮ ಗ್ರಾಮಗಳಿಗೆ ಹಿಂತಿರುಗಿದ ಬಳಿಕ ವಾಂತಿ ಕಾಣಿಸಿಕೊಂಡಿದೆ. ಒಬ್ಬ ಭಕ್ತ ದಾರಿಮಧ್ಯೆಯೇ ಕುಸಿದು ಮೃತಪಟ್ಟರು. ವಡ್ಡರದೊಡ್ಡಿ ಗ್ರಾಮದ ಅನಿತಾ ತೀವ್ರ ಅಸ್ವಸ್ಥಳಾಗಿ ಮನೆಯಲ್ಲೇ ಸಾವಿಗೀಡಾದರು.

ಅಣ್ಣಯ್ಯಪ್ಪ ಅವರು ತೀವ್ರ ಅಸ್ವಸ್ಥಗೊಂಡು ಹೋಲಿಕ್ರಾಸ್‌ ಆಸ್ಪತ್ರೆಗೆ ಕರೆತರುವ ವೇಳೆಗೆ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಶಾಂತರಾಜು, ಗೋಪಿಯಮ್ಮ ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ ಮೃತಪಟ್ಟರು. ಪಾಪಣ್ಣ ಕೊಳ್ಳೇಗಾಲದ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೈಸೂರಿನ ಕೆ. ಆರ್‌. ಆಸ್ಪತ್ರೆ ಮತ್ತು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಯಲಾ ಒಬ್ಬರು ಸೇರಿ ಒಟ್ಟು 8 ಮಂದಿ ಮೃತಪಟ್ಟರು.

ಚಿಕಿತ್ಸೆಗಾಗಿ ಪರದಾಟ
ವಿಷ ಬೆರೆತ ಆಹಾರ ಸೇವಿಸಿ ಪ್ರಾಣಾಪಾಯಕ್ಕೆ ಗುರಿಯಾದವರು ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ಹಾಗೂ ಸೌಲಭ್ಯ ದೊರೆಯದೇ ಪರದಾಡಿದರು. ಕೊಳ್ಳೇಗಾಲದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸುಳುವಾಡಿಯಲ್ಲಿ ಅಸ್ವಸ್ಥಗೊಂಡ ನೂರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲು ಹನೂರು, ಕೊಳ್ಳೇಗಾಲ ಆಸ್ಪತ್ರೆಗಳಿಗೆ ಕರೆತರಲು ದೊಡ್ಡ ಸವಾಲು ಎದುರಾಯಿತು.

ಬಳಿಕ ಆಸ್ಪತ್ರೆಗಳಲ್ಲೂ ವೆಂಟಿಲೆಟರ್‌, ಆ್ಯಂಬುಲೆನ್ಸ್‌ ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆ ಕಾಣಿಸಿಕೊಂಡಿತು. ಎಚ್ಚೆತ್ತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಮೈಸೂರಿನಿಂದ 15 ಆ್ಯಂಬುಲೆನ್ಸ್‌ ವಾಹನಗಳನ್ನು ಕಳುಹಿಸಿದರಲ್ಲದೇ, ಗಂಭೀರವಾಗಿ ಅಸ್ವಸ್ಥಗೊಂಡವರನ್ನು ಮೈಸೂರಿಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ