ವಿಧಾನಪರಿಷತ್ ಸಭಾಪತಿ ಸ್ಥಾನ, ಮೇಲ್ಮನೆ ಸದಸ್ಯ ಪ್ರತಾಪಚಂದ್ರ ಶೆಟ್ಟಿ ನಾಮಪತ್ರ ಸಲ್ಲಿಕೆ

ಬೆಳಗಾವಿ(ಸುವರ್ಣಸೌಧ), ಡಿ.11-ಮೇಲ್ಮನೆ ಹಿರಿಯ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ ಅವರು ವಿಧಾನಪರಿಷತ್‍ನ ಸಭಾಪತಿ ಸ್ಥಾನ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಜಮೀರ್ ಅಹಮ್ಮದ್ ಖಾನ್, ಮೇಲ್ಮನೆ ಸದಸ್ಯರಾದ ರವಿ, ಐವಾನ್ ಡಿಸೋಜಾ ಮುಂತಾದವರೊಂದಿಗೆ ಆಗಮಿಸಿದ ಅವರು, ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರಿಗೆ ಸಭಾಪತಿ ಸ್ಥಾನಕ್ಕೆ ಚುನಾವಣೆ ಪ್ರಸ್ತಾವನೆ ಸಲ್ಲಿಸಿದರು.

ಕೊನೆ ಕ್ಷಣದವರೆಗೂ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಇವರ ಆಯ್ಕೆ ಬಹುತೇಕ ಖಚಿತಗೊಂಡಿದೆ. ಇವರ ಅಧಿಕಾರಾವಧಿ 2022ರವರೆಗೆ ಮುಂದುವರೆಯಲಿದೆ.

ನಿನ್ನೆಯವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರೇ ಸಭಾಪತಿ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿತ್ತು. ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡದ ಪ್ರತಾಪ್‍ಚಂದ್ರಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಹೈಕಮಾಂಡ್ ಮುಖಂಡರು ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಪ್ರತಾಪ್‍ಚಂದ್ರ ಶೆಟ್ಟಿ ಅವರು ನಾಮಪತ್ರ ಸಲ್ಲಿಸಿದರು.

ಮೇಲ್ಮನೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ.ಚುನಾವಣೆ ನಡೆದರೆ ಕಾಂಗ್ರೆಸ್‍ಗೆ ಸಭಾಪತಿ ಸ್ಥಾನ, ಉಪಸಭಾಪತಿ, ಸಚೇತಕ ಸ್ಥಾನ ದೊರೆಯಲಿದೆ.ಮೈತ್ರಿ ಆಡಳಿತವಿರುವುದರಿಂದ ಸಭಾಪತಿ ಸ್ಥಾನ ಪಡೆದು ಉಳಿದ ಸ್ಥಾನಗಳನ್ನು ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್‍ಚಂದ್ರ ಶೆಟ್ಟಿ ಅವರು, ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಸಭಾಪತಿ ಸ್ಥಾನ ನಿರೀಕ್ಷಿಸಿರಲಿಲ್ಲ. ನನ್ನನ್ನು ಆಯ್ಕೆ ಮಾಡಿದ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಹಿರಿತನವನ್ನು ಗಮನಿಸಿ ನಮ್ಮ ಪಕ್ಷ ನನಗೆ ಅವಕಾಶ ಕೊಟ್ಟಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ