ಸಿಸಿಬಿ ಪೊಲೀಸರಿಂದ ಕಳ್ಳನ ಬಂಧನ

ಮೈಸೂರು, ಡಿ.11-ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಸಾತಗಳ್ಳಿ ಎರಡನೆ ಹಂತದ ವಾಸಿ ಬಿ.ಎ.ರಂಗಸ್ವಾಮಿ(30) ಬಂಧಿತ ಆರೋಪಿ.

ಬಂಧಿತನಿಂದ ಪೊಲಿಸರು 5.25 ಲಕ್ಷ ಬೆಲೆಯ ಒಂಭತ್ತು ವಿವಿಧ ಕಂಪನಿಗಳ ಲ್ಯಾಪ್‍ಟಾಪ್‍ಗಳು ಹಾಗೂ 29 ಮೊಬೈಲ್ ಪೊನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ರಂಗಸ್ವಾಮಿಯು ನಗರದ ವಿವಿಧ ಪ್ರದೇಶಗಳು ಹಾಗೂ ಚೆನ್ನೈನಲ್ಲಿ ವಿದ್ಯಾರ್ಥಿಯಂತೆ ನಟಿಸಿ ಹಾಸ್ಟೆಲ್‍ಗಳು ಹಾಗೂ ಪಿಜಿಗಳಿಗೆ ಹೋಗಿ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

ನಗರದ ವಿವಿಧ ಹಾಸ್ಟೆಲ್‍ಗಳು ಹಾಗೂ ಪಿಜಿಗಳಲ್ಲಿ ಲ್ಯಾಪ್‍ಟಾಪ್‍ಗಳು, ಮೊಬೈಲ್‍ಗಳು ಪದೇ ಪದೇ ಕಳುವಾಗುತ್ತಿತ್ತು. ಹಾಗಾಗಿ ಈ ಸಂಬಂಧ ಹಲವಾರು ಠಾಣೆಗಳಲ್ಲಿ ದೂರುಗಳು ಬರುತ್ತಿದ್ದವು. ಇದನ್ನು ಆಧರಿಸಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಸಿಪಿ ವಿಕ್ರಮ ಅಮಟೆ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಲಿಂಗಪ್ಪ ಅವರ ನೇತೃತ್ವದಲ್ಲಿ ಸಿಸಿಬಿಯ ಇನ್ಸ್‍ಪೆಕ್ಟರ್ ಜಗದೀಶ್, ಎಎಸ್‍ಐ ಚಂದ್ರೇಗೌಡ, ಅಲೆಗ್ಸಾಂಡರ್ ಮತ್ತು ಸಿಬ್ಬಂದಿ ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ