ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡಿರುವ ರಥಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಳ್ಳಲಾಗಿರುವ ರಥಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಥಯಾತ್ರೆಯನ್ನು ಮುಂದೂಡಲಾಗಿದೆ ಹೊರತು ಅದನ್ನು ರದ್ದುಪಡಿಸಲಾಗಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಬಿಜೆಪಿ ಬದ್ಧವಾಗಿದ್ದು, ನಾವು ರಥಯಾತ್ರೆಯನ್ನು ನಡೆಸಿಯೇ ನಡೆಸುತ್ತೇವೆ. ಅದನ್ನು ತಡೆಯಲಾಗದು ಎಂದರು.

ರಥಯಾತ್ರೆ ರದ್ದಾಗಿಲ್ಲ, ದಿನಾಂಕವನ್ನು ಮುಂದೂಡಲಾಗಿದೆಯಷ್ಟೇ. ನಾವು ಕಾನೂನಿನ ಪ್ರಕಾರವೇ ಯಾತ್ರೆಯನ್ನು ಆಯೋಜಿಸುತ್ತೇವೆ. ಯಾತ್ರೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಸಂಚರಿಸಲಿದೆ. ನಾನು ನಾಳೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಈ ಕುರಿತು ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.

ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಕಾರಣ ನೀಡಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿ ಕೋಲ್ಕತ ಹೈಕೋರ್ಟ್‌ಗೆ ಯಾತ್ರೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಬಂಗಾಳದ ಕೊಚ್ಬೀಹಾರ್‌ನಿಂದ ಬಿಜೆಪಿ ಇಂದು ಯಾತ್ರೆಯನ್ನು ನಡೆಸುವಂತಿಲ್ಲ ಎಂದು ಆದೇಶಿಸಿತ್ತು. ಬಿಜೆಪಿ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರಿಂದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ.

ಬಿಜೆಪಿ ಪಶ್ಚಿಮ ಬಂಗಾಳದ ಕೂಚ್​ ಬೆಹರ್​ನಲ್ಲಿ ಇಂದು ಯಾತ್ರೆ ಆರಂಭಿಸಲು ಸಿದ್ಧತೆ ನಡೆಸಿತ್ತು. ಇದೇ ವಿಧದಲ್ಲಿ ಡಿ. 9 ರಂದು ಗಂಗಾಸಾಗರದಿಂದ ಮತ್ತು ಡಿ. 14 ರಂದು ತಾರಾಪಿಥ್​ನಿಂದ ಯಾತ್ರೆ ಆರಂಭಿಸಲು ಸಿದ್ಧತೆ ನಡೆಸಲಾಗಿತ್ತು. ಈ ಯಾತ್ರೆಗಳು ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿತ್ತು.

Amit Shah, West Bengal,BJP,Rath yatras

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ