ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು(ಆರ್ ಟಿಇ) ಕಾಯ್ದೆಯನ್ನು ತಿದ್ದುಪಡಿ ಮಾಡಿ ಮೂಲ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮುಂದಾಗಿದೆ.
ಖಾಸಗಿ ಶಾಲೆಗೆ ಬದಲಾಗಿ ಸರ್ಕಾರಿ ಶಾಲೆಗಳಲ್ಲಿ 25% ಸೀಟು ಅನುಷ್ಠಾನಕ್ಕೆ ಒಪ್ಪಿಗೆ ನೀಡುವ ಮೂಲಕ ಹೊಸ ತಿದ್ದುಪಡಿಗೆ ಬುಧವಾರ ನಡೆದ ಕ್ಯಾಬಿನೆಟ್ ನಲ್ಲಿ ಸಮ್ಮತಿ ಸೂಚಿಸಿದೆ. ಈ ಮೂಲಕ ಸರ್ಕಾರಿ ಶಾಲೆಯನ್ನು ಉಳಿಸಲು ಸರ್ಕಾರ ಮುಂದಾಗಿದೆ.
ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ಆರ್ ಟಿಇ ಸೀಟು ಉಚಿತವಾಗಿ ಸಿಗುವುದಿಲ್ಲ. ಒಂದು ವೇಳೆ ಸುತ್ತಮುತ್ತ ಸರ್ಕಾರಿ ಶಾಲೆ ಇಲ್ಲವಾದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಬಡ ವಿದ್ಯಾರ್ಥಿಗಳ ಪ್ರದೇಶದ ಸುತ್ತಮುತ್ತ ಸರ್ಕಾರಿ ಶಾಲೆ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ಉಚಿತ ಸೀಟು ಸಿಗುವುದಿಲ್ಲ.
ಈಗ ಇರುವ ಪದ್ದತಿ ಏನಿದೆ?
ಖಾಸಗಿ ಶಾಲೆಗಳಲ್ಲಿ ಶೇ.25 ಸೀಟು ಮಕ್ಕಳಿಗೆ ನಿಗದಿ ಮಾಡಲಾಗಿತ್ತು. ವಾರ್ಡ್, ಗ್ರಾಮ, ನಗರ ವ್ಯಾಪ್ತಿಯ ಒಂದು ಕಿಲೋಮೀಟರ್ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಬಡ ಮಕ್ಕಳಿಗೆ ಕಡ್ಡಾಯವಾಗಿ ಶೇ.25 ಸೀಟು ನೀಡಬೇಕಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವೇ ಖಾಸಗಿ ಶಾಲೆಗಳಿಗೆ ಹಣ ನೀಡುತ್ತಿತ್ತು. ಹೀಗಾಗಿ ಪೋಷಕರು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗೆ ಮಕ್ಕಳನ್ನ ಸೇರಿಸುತ್ತಿದ್ದರು.
ಹೊಸ ತಿದ್ದುಪಡಿಯಲ್ಲಿ ಏನಿದೆ?
ಕಡ್ಡಾಯವಾಗಿ ಮಗುವಿಗೆ 6-14 ವರ್ಷ ಶಿಕ್ಷಣ ನೀಡಬೇಕು. ಮಗು ವಾಸಿಸುವ 1 ಕಿಲೋಮೀಟರ್ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಮೊದಲ ಆದ್ಯತೆ ಮೇಲೆ ದಾಖಲಾಗಿ ಶಿಕ್ಷಣ ಪಡೆಯಬೇಕು. ಸರ್ಕಾರಿ ಶಾಲೆ ಇಲ್ಲದೆ ಇದ್ದರೆ 3-5 ಕಿಲೋಮೀಟರ್ ವ್ಯಾಪ್ತಿಯ ಅನುದಾನಿತ ಶಾಲೆಯಲ್ಲಿ ಮಗುವಿಗೆ ಶಿಕ್ಷಣ ಕೊಡಿಸಬೇಕು. ಒಂದು ವೇಳೆ ಅನುದಾನಿತ ಶಾಲೆಯೂ ಇಲ್ಲದೆ ಹೋದರೆ ಖಾಸಗಿ ಶಾಲೆಯಲ್ಲಿ ಶೇ.25 ಸೀಟು ಕೊಡಿಸಿ ಮಗುವಿಗೆ ಶಿಕ್ಷಣ ಕೊಡಿಸಬೇಕು. ಖಾಸಗಿ ಶಾಲೆಯ ಶಿಕ್ಷಣಕ್ಕೆ ಸರ್ಕಾರವೇ ಹಣ ನೀಡುತ್ತದೆ.
ತಿದ್ದುಪಡಿ ಯಾಕೆ?
ಆರ್ ಟಿಇ ಕಾಯ್ದೆ ತಿದ್ದುಪಡಿಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ ಉಳಿಯುತ್ತದೆ. ಜೊತೆಗೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಿಸಲು ಈ ನಿರ್ಧಾರಕ್ಕೆ ಬರಲಾಗಿದೆ.
ಕಾಯ್ದೆಯ ಮೂಲ ಉದ್ದೇಶ ಏನು?
ಮಕ್ಕಳಿಗೆ ಶಿಕ್ಷಣ ವಂಚನೆ ಆಗಬಾರದು ಎಂದು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹೇಳುತ್ತದೆ. ಕಾಯ್ದೆಯಲ್ಲಿ ಮೊದಲು ಸರ್ಕಾರಿ ಶಾಲೆ ಮಗುವಿಗೆ ಶಿಕ್ಷಣ ಕಡ್ಡಾಯವಾಗಿ ಕೊಡಿಸಬೇಕು. ಸರ್ಕಾರಿ ಶಾಲೆ ಇಲ್ಲದೆ ಇದ್ದರೆ ಅನುದಾನಿತ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು. ಒಂದು ವೇಳೆ ಅನುದಾನಿತ ಶಾಲೆ ಇಲ್ಲದೆ ಇದ್ದರೆ ಖಾಸಗಿ ಶಾಲೆಯಲ್ಲಿ ಮಗುವಿಗೆ ಕಡ್ಡಾಯವಾಗಿ ಸೀಟು ಕೊಡಬೇಕಿತ್ತು. ಆದರೆ ಕರ್ನಾಟಕ ಮೊದಲೇ ಖಾಸಗಿ ಶಾಲೆಗಳ ಸೀಟಿಗೆ ಅವಕಾಶ ಕಲ್ಪಿಸಿತ್ತು. ಈ ನಿಯಮದಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಯ್ದೆಯ ಮೂಲ ಅಂಶ ತಿದ್ದುಪಡಿ ಮಾಡಲು ಸರ್ಕಾರದ ನಿರ್ಧಾರ ಮಾಡಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.