ಶೌರ್ಯ ದಿನ ಆಚರಿಸಲು ನಿರ್ಧಿಸಿರುವುದರಲ್ಲಿ ತಪ್ಪಿಲ್ಲ: ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 26 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಯೋಧ್ಯೆಯಲ್ಲಿ ಇಂದು ಶೌರ್ಯ ದಿನ ಆಚರಿಸಲು ನಿರ್ಧಿಸಿರುವುದರಲ್ಲಿ ತಪ್ಪಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ವಾಮಿ, ಚಳುವಳಿಯನ್ನು ಮುನ್ನಡೆಸಿದ್ದ ವಿಎಚ್‌ಪಿಗೆ ಈ ದಿನವನ್ನು ಸಂಭ್ರಮಿಸುವ ಹಕ್ಕು ಇದೆ. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮನ ದೇವಾಲಯವಿತ್ತು. ಅದು ರಾಮನ ಜನ್ಮಭೂಮಿ. ಮೊಘಲ್‌ ದೊರೆ ಬಾಬರ್‌ ದೇಶಕ್ಕೆ ಬಂದ ಬಳಿಕ ಆತನ ಸೈನಿಕರು ದೇವಾಲಯವನ್ನು ನಾಶಪಡಿಸಿ, ಅದರ ಮೇಲೆ ಮಸೀದಿಯನ್ನು ನಿರ್ಮಿಸಿದರು ಎಂದರು.

ಬಾಬರ್‌ ಕೃತ್ಯವನ್ನು ಸಾಕಷ್ಟು ಜನರು ಪ್ರತಿಭಟಿಸಿದ್ದರು. ಆವೇಳೆ ಬಹುಶಃ ನಾಲ್ಕೈದು ಸಾವಿರ ಜನರನ್ನೂ ಕೊಲ್ಲಲಾಗಿದೆ. ಒಂದು ವೇಳೆ ಈ ದಿನವನ್ನು ಶೌರ್ಯ ದಿನವಾಗಿ ಆಚರಿಸಲು ವಿಎಚ್‌ಪಿ ಬಯಸಿದರೆ ಅದರಲ್ಲಿ ತಪ್ಪಿಲ್ಲ. ಆದರೆ, ಅದು ಶಾಂತಿಯುತವಾಗಿರಲಿ ಎಂದರು.

ವಿಎಚ್‌ಪಿಯು ರಾಮ ದೇವಾಲಯ ನಿರ್ಮಾಣಕ್ಕೆ ಆಗ್ರಹಿಸಿ ಅಯೋಧ್ಯೆಯಲ್ಲಿ ನವೆಂಬರ್‌ 25ರಂದು ಧರ್ಮಸಭೆ ನಡೆಸಿತ್ತು. ಸದ್ಯ ಬಾಬ್ರಿ ಮಸೀದಿ ದ್ವಂಸ ದಿನವನ್ನು(ಡಿ.06)ಶೌರ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಅಲ್ಲದೇ ಡಿಸೆಂಬರ್‌ 18ರಂದು ಗೀತೆ ಜಯಂತಿಯನ್ನೂ ಹಮ್ಮಿಕೊಂಡಿದೆ. ಈ ದಿನವನ್ನು ಶ್ರೀ ಕೃಷ್ಣ, ಅರ್ಜುನನಿಗೆ ಭಗವದ್ಗೀತೆ ಬೋಧಿಸಿದ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಇನ್ನು ಮುಸ್ಲಿಂ ಸಂಘಟನೆಗಳು ಶೌರ್ಯ ದಿನಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ನಿರ್ಧರಿಸಿವೆ.

BJP leader, Subramanian Swamy,VHP ,Babri mosque Demolition Anniversary

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ