ಅಂಬರೀಶ್ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ, ನಿರ್ಮಿಸುವಂತೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಸಲಹೆ

ಬೆಂಗಳೂರು, ನ.30-ಅಂಬರೀಶ್ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್‍ಸಿಟಿ ನಿರ್ಮಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಸಂಗ ನಡೆಯಿತು.

ನಗರದ ಅಂಬೇಡ್ಕರ್ ಭವನದಲ್ಲಿಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರರಂಗ ಆಯೋಜಿಸಿದ್ದ ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ಫಿಲ್ಮ್‍ಸಿಟಿ ಮಾಡಬೇಕು ಎಂಬುದು ಅಂಬರೀಶ್ ಅವರ ಆಸೆಯಾಗಿತ್ತು.ಅದಕ್ಕಾಗಿ ನಾನು ಜಾಗವನ್ನೂ ಕೊಟ್ಟಿದ್ದೇನೆ. ಕೆಲಸ ಪ್ರಗತಿಯಲ್ಲಿದೆ.ಇದನ್ನು ಇನ್ನಷ್ಟು ಚುರುಕುಗೊಳಿಸಿ ಅಂಬರೀಶ್ ಅವರ ಹೆಸರಿಡಿ ಎಂದು ವೇದಿಕೆಯಲ್ಲಿದ್ದ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರು ಹೇಳಿದ ಮೇಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮೈಸೂರಿನಲ್ಲಿ ಫಿಲ್ಮ್‍ಸಿಟಿ(ಚಿತ್ರನಗರಿ) ನಿರ್ಮಿಸುತ್ತೇವೆ. ಅದೇ ರೀತಿ ರಾಮನಗರದಲ್ಲಿ ಚಿತ್ರರಂಗದ ವಿಶ್ವವಿದ್ಯಾಲಯ ಸ್ಥಾಪಿಸುವ ಬಯಕೆ ಇದೆ ಎಂದರು.

ನೆರೆ ರಾಜ್ಯಗಳಲ್ಲಿ ಇರುವಂತೆ ನಿಪುಣ ತಂತ್ರಜ್ಞರನ್ನು ಸಜ್ಜುಗೊಳಿಸುವ ಅಗತ್ಯ ಕನ್ನಡ ಚಿತ್ರರಂಗಕ್ಕೆ ಇದೆ.ಅದಕ್ಕಾಗಿ ರಾಮನಗರದಲ್ಲಿ ಚಿತ್ರರಂಗದ ವಿವಿ ಸ್ಥಾಪಿಸಲಾಗುವುದು.ಚಿತ್ರನಗರಿಗೆ ಅಂಬರೀಶ್ ಅವರ ಹೆಸರು, ವಿವಿಗೆ ರಾಜ್‍ಕುಮಾರ್ ಅವರ ಹೆಸರಿಡುವ ಬಗ್ಗೆ ಪರಿಶೀಲಿಸಲಾಗುವುದು. ವಿಷ್ಣುವರ್ಧನ್ ಅವರ ಹೆಸರಿಗೂ ಗೌರವ ತರುವಂತಹ ಕೆಲಸಗಳನ್ನು ಮಾಡಲಾಗುವುದು.ನಮಗೆ ವಿಷ್ಣುವರ್ಧನ್ ಬಗ್ಗೆಯೂ ಅಪಾರವಾದ ಗೌರವವಿದೆ.ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ವಿಷ್ಣು ಸ್ಮಾರಕ ನಿರ್ಮಾಣದಲ್ಲಿ ಗೊಂದಲ ಉಂಟಾಗಿದೆ.ಅದನ್ನು ಬಗೆಹರಿಸಲಾಗುವುದು. ಆದರೆ, ಈ ಬಗ್ಗೆ ಮಾತನಾಡುವಾಗ ಭಾಷೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಮೇಲೆ ಪರೋಕ್ಷವಾಗಿ ಕಿಡಿ ಕಾರಿದರು.
ಇದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ ಅವರು, ಅಂಬರೀಶ್ ಸ್ವಭಾವತಃ ಒರಟರಾಗಿ ಕಂಡರೂ ಅವರ ಹೃದಯ ವೈಶಾಲ್ಯತೆ ಜನಸಾಮಾನ್ಯರ ಪರವಾಗಿ ಅವರ ಮನ ಮಿಡಿಯುತ್ತಿತ್ತು ಎಂದು ಹೇಳಿದರು.

ಅಂಬರೀಶ್ ಸಾವಿನಿಂದ ಚಿತ್ರರಂಗ ಬಡವಾಗಿದೆ. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ಈ ಮೂರು ಜನರು ಮರೆಯಲಾಗದ ಮಹನೀಯರು. ಅಂಬರೀಶ್ ಅವರಿಗೆ ಇದ್ದಷ್ಟು ಸ್ನೇಹ ಬಳಗ ಬೇರೆ ಯಾರಿಗೂ ಇರಲಿಲ್ಲ ಎಂದರು.
ಅಂಬರೀಶ್ ಅವರು 1973ರಲ್ಲಿ ನನಗೆ ಪರಿಚಯವಾದರು.ಆಗ ನಾನು ವಕೀಲನಾಗಿದ್ದೆ.ಒಂದು ಹೋಟೆಲ್‍ನಲ್ಲಿ ನಮ್ಮಿಬ್ಬರ ಪರಿಚಯವಾಯಿತು.ಆ ವೇಳೆಗೆ ಅವರು ನಾಗರಹಾವು ಚಿತ್ರದಲ್ಲಿ ನಟಿಸಿದ್ದರು.ಅವರ ಮಾತು ಬಹಳ ಒರಟಾದರೂ ಹೃದಯ ತುಂಬಾ ಮೃದು, ಸ್ನೇಹ ಜೀವಿ.ಯಾವುದೇ ಸ್ಥಾನ ಬಂದರು, ಹೋದರೂ ಸ್ನೇಹದಲ್ಲಿ ತಾರತಮ್ಯವಿರಲಿಲ್ಲ. ಚಿತ್ರರಂಗಕ್ಕಾಗಲಿ, ರಾಜಕಾರಣಕ್ಕಾಗಲಿ ಅವರು ಬಯಸಿ ಬಂದವರಲ್ಲ. ದೇವೇಗೌಡರು ಪ್ರಧಾನಮಂತ್ರಿಯಾಗಿ ದೆಹಲಿಗೆ ಹೋದಾಗ ನಾವು ಒತ್ತಾಯ ಮಾಡಿ ಅಂಬರೀಶ್ ಅವರನ್ನು ಚುನಾವಣೆಗೆ ನಿಲ್ಲಿಸಿದೆವು.ಮಂಡ್ಯ, ರಾಮನಗರ ಎರಡೂ ಕ್ಷೇತ್ರಗಳಲ್ಲೂ ಅಂಬರೀಶ್ ತಮ್ಮದೇ ಆದ ಛಾಪು ಮೂಡಿಸಿದ್ದರು.ರಾಜಕೀಯ ಅಥವಾ ಚಿತ್ರರಂಗದಲ್ಲಾಗಲಿ ಅಂಬರೀಶ್ ಅವರಿಗೆ ವೈರಿಗಳೇ ಇರಲಿಲ್ಲ ಎಂದು ತಿಳಿಸಿದರು.
ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದೆ. ಯಾವುದೇ ಸಮಸ್ಯೆ ಬಂದರೂ ಮುಂದೆ ನಿಂತು ಬಗೆಹರಿಸುತ್ತಿದ್ದರು. ಅವರ ಬಗ್ಗೆ ಎಲ್ಲರಿಗೂ ಗೌರವ ಇದ್ದುದರಿಂದ ಅವರ ಮಾತನ್ನು ಯಾರೂ ತಳ್ಳಿ ಹಾಕುತ್ತಿರಲಿಲ್ಲ. ಕಲಾವಿದರ ಸಂಘ ಕಟ್ಟಡ ಕಟ್ಟಿಸಲು ಅಂಬರೀಶ್ ಮತ್ತು ರಾಕ್‍ಲೈನ್ ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಬಂದು ಧನ ಸಹಾಯಕ್ಕಾಗಿ ಮನವಿ ಮಾಡಿದ್ದರು. ನಾನು ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೆ.ಅಂಬರೀಶ್ ಅವರದು ನಿಸ್ವಾರ್ಥ ಬದುಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ