ಕ್ಷೇತ್ರ ಉಸ್ತುವಾರಿ ಮತ್ತು ಪ್ರಭಾರಿಗಳ ಬದಲಾವಣೆಗೆ ಮುಖಂಡರ ಪಟ್ಟು

ಬೆಂಗಳೂರು,ನ.29-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಹಿಂದೆ ರಚಿಸಲಾಗಿದ್ದ ಕ್ಷೇತ್ರ ಉಸ್ತುವಾರಿಗಳು ಮತ್ತು ಪ್ರಭಾರಿಗಳನ್ನು ಬದಲಾವಣೆ ಮಾಡುವಂತೆ ಬಿಜೆಪಿ ಮುಖಂಡರು ಪಟ್ಟು ಹಿಡಿದಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆ ಮತ್ತು ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಈಗ ನೇಮಕವಾಗಿರುವ ಪಟ್ಟಿಯನ್ನು ಬದಲಾಯಿಸಿ ಹೊಸದಾಗಿ ಉಸ್ತುವಾರಿ ಮತ್ತು ಪ್ರಭಾರಿಗಳನ್ನು ನೇಮಕ ಮಾಡಬೇಕೆಂದು ಒತ್ತಡ ಹಾಕಿದ್ದಾರೆ.
ಹೀಗೆ ಪಕ್ಷದವರಿಂದಲೇ ಒತ್ತಡ ಹೆಚ್ಚಾಗಿರುವ ಕಾರಣ ಈಗಾಗಲೇ ಸಿದ್ಧಗೊಂಡಿರುವ ಪಟ್ಟಿಯನ್ನು ಪರಿಷ್ಕರಿಸಲು ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ತಮಗೆ ವಹಿಸಲಾಗಿರುವ ಕ್ಷೇತ್ರಗಳ ಬಗ್ಗೆ ಕೆಲ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ ತಕ್ಷಣವೇ ಅದನ್ನು ಬದಲಾಯಿಸಲು ಬೇಡಿಕೆ ಮುಂದಿಟ್ಟಿದ್ದಾರೆ.
ಈ ಮೊದಲು ಯಡಿಯೂರಪ್ಪ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರಿಗೆ ಮೈಸೂರು, ಕೊಡುಗು ಉಸ್ತುವಾರಿಯನ್ನು ನೀಡಲಾಗಿತ್ತು. ತಾವು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದೆ.ಏಕಾಏಕಿ ಆ ಜಿಲ್ಲೆಗೆ ನೇಮಕ ಮಾಡಿರುವುದರಿಂದ ಪಕ್ಷ ಸಂಘಟಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಇತ್ತೀಚೆಗೆ ನಡೆದ ಶಿವಮೊಗ್ಗ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅತಿಹೆಚ್ಚು ಮುನ್ನಡೆ ಬಂದಿರುವುದು ನನ್ನ ಕ್ಷೇತ್ರದಲ್ಲಿ ಏಕಾಏಕಿ ಮೈಸೂರಿನ ಉಸ್ತುವಾರಿ ನೀಡಿದರೆ ನಿಭಾಯಿಸುವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಇನ್ನು ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಕೂಡ ತಮಗೆ ನೀಡಿರುವ ಚಿಕ್ಕಬಳ್ಳಾಪುರ ಬದಲಿಗೆ ಚಾಮರಾಜನಗರ ಇಲ್ಲವೇ ಬೇರೊಂದು ಕಡೆ ಉಸ್ತುವಾರಿ ನೀಡಬೇಕೆಂದು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಾಗಿದೆ. ನಾನು ವೀರಶೈವ ಸಮುದಾಯಕ್ಕೆ ಸೇರಿದವನು. ಆ ಎರಡು ಜಿಲ್ಲೆಗಳಿಗೆ ಅದೇ ಸಮುದಾಯವರನ್ನು ನೇಮಿಸಿ ನಮಗೆ ಬೇರೆ ಪ್ರಭಾರಿ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಕೋಲಾರ, ಲೋಕಸಭಾ ಕ್ಷೇತ್ರಕ್ಕೆ ಸಂಚಾಲಕರಾಗಿ ಮಾಜಿ ಶಾಸಕ ವೈ.ಸಂಪಂಗಿ ಅವರಿಗೆ ನೀಡಲಾಗಿತ್ತು.ಇಲ್ಲಿಯೂ ಕೂಡ ಬದಲಾವಣೆಯಾಗಬೇಕೆಂಬ ಬೇಡಿಕೆ ಕೇಳಿಬಂದಿದೆ.

ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕೃಷ್ಣಾರೆಡ್ಡಿಯನ್ನು ನೇಮಕ ಮಾಡಿರುವುದಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೃಷ್ಣಾರೆಡ್ಡಿ ಮೂಲತಃ ಕೋಲಾರ ಜಿಲ್ಲೆಯವರು. ಅವರಿಗೆ ಕೋಲಾರ ಇಲ್ಲವೇ ಚಿಕ್ಕಬಳ್ಳಾಪುರ ಕ್ಷೇತ್ರಗಳ ಉಸ್ತುವಾರಿ ಮಾಡಿ. ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬೇರೊಬ್ಬರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ.

ಅಧಿವೇಶನದ ನಂತರ ಬದಲಾವಣೆ:
ಹೀಗೆ ಪಕ್ಷದ ಮುಖಂಡರು ಪ್ರಭಾರಿಗಳು ಮತ್ತು ಉಸ್ತುವಾರಿಗಳನ್ನು ನೇಮಕ ಮಾಡುವಂತೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದ ನಂತರ ಕೆಲವು ಬದಲಾವಣೆ ಮಾಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ