ಮಹಾರಾಷ್ಟ್ರದಲ್ಲಿ ರೈತರು ಹಾಗೂ ಬುಡಕಟ್ಟು ಜನಾಂಗದವರ ಪ್ರತಿಭಟನೆ

ಮುಂಬೈ: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಭುಗಿಲೆದ್ದು, ತಣ್ಣಗಾದ ಬೆನ್ನಲ್ಲೇ ಈಗ ಮಹಾರಾಷ್ಟ್ರ ರೈತರ ಸರದಿ. ಸ್ವಾಮಿನಾಥನ್ ವರದಿ ಜಾರಿ, ಕನಿಷ್ಠ ಬೆಂಬಲ ಬೆಲೆ, ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದ ರೈತರು ಹಾಗೂ ಬುಡಕಟ್ಟು ಜನಾಂಗದವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರದ ದಾದಾರ್ ನಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ದಕ್ಷಿಣ ಮಹಾರಾಷ್ಟ್ರ, ವಿದರ್ಭ, ಅಹಮದ್‌ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿರುವ ಹತ್ತು ಸಾವಿರಕ್ಕೂ ಅಧಿಕ ರೈತರು ಮುಂಬೈನ ಆಜಾದ್ ಮೈದಾನದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಈ ಹೋರಾಟಕ್ಕೆ ಲೋಕ ಸಂಘರ್ಷ ಮೋರ್ಚಾ, ಆಮ್‌ ಆದ್ಮಿ ಪಕ್ಷ ಹಾಗೂ ಕೆಲವು ಸಾಮಾಜಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಇನ್ನು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಿಮ್ಮನ್ನು ಶೀಘ್ರವೇ ಭೇಟಿ ಮಾಡಲಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಇತರ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

maharashtra,farmers,tribals,protest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ