ಸಾಂಕ್ರಾಮಿಕ ರೋಗಗಳನ್ನು ತಡೆಯಲು ಇದುವರೆಗೂ ನಿಖರವಾದ ಮಾರ್ಗೋಪಾಯಗಳು ಲಭ್ಯವಾಗಿಲ್ಲ: ಡಾ.ಎಂ.ಮಯ್ಯ

Varta Mitra News

ಬೆಂಗಳೂರು, ನ.19-ಕಳೆದ 30 ವರ್ಷಗಳ ಅವಧಿಯಲ್ಲಿ ಕನಿಷ್ಠ 30 ಹೊಸ ಸಾಂಕ್ರಾಮಿಕ ರೋಗಗಳು ವಿಶ್ವದಾದ್ಯಂತ ಹುಟ್ಟಿಕೊಂಡಿದ್ದು, ಲಕ್ಷಾಂತರ ಜನರ ಜೀವಗಳಿಗೆ ಕುತ್ತು ತಂದಿವೆ. ಆದರೆ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಇದುವರೆಗೂ ನಿಖರವಾದ ಮಾರ್ಗೋಪಾಯಗಳು ಲಭ್ಯವಾಗಿಲ್ಲ ಎಂದು ಖ್ಯಾತ ಹೃದಯ ತಜ್ಞ ಹಾಗೂ ಕರ್ನಾಟಕ ವೈದ್ಯಕೀಯ ಸೇವೆಗಳ ಮಾಜಿ ಪ್ರಾಧ್ಯಾಪಕ ಡಾ.ಎಂ.ಮಯ್ಯ ಹೇಳಿದ್ದಾರೆ.

ನಗರದಲ್ಲಿ ಫೀವರ್ ಫೌಂಡೇಶನ್ ಏರ್ಪಡಿಸಿದ್ದ ಜ್ವರ ಕುರಿತಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಫೆಫ್‍ಕಾನ್-2018 ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಕ್ರಾಮಿಕ ರೋಗಗಳ ತಡೆಗೆ ಅಥವಾ ನಿಯಂತ್ರಣಕ್ಕೆ ಅತ್ಯಂತ ಕಡಿಮೆ ಪ್ರಮಾಣದ ಅವಕಾಶವಿದೆ. ಜಾಗತಿಕ ಮಟ್ಟದಲ್ಲಿ ಮಾನವನ ಆರೋಗ್ಯದ ಮೇಲೆ ಸಾಂಕ್ರಾಮಿಕ ರೋಗಗಳು ನಿರಂತರವಾಗಿ ದುಷ್ಪರಿಣಾಮ ಬೀರುತ್ತಲೇ ಇವೆ. ಇದು ಅತಿ ದೊಡ್ಡ ಸವಾಲಾಗಿದ್ದು, ಶೇ.20ರಷ್ಟು ಸಾವುಗಳು ಸಾಂಕ್ರಾಮಿಕ ರೋಗಗಳಿಂದಲೇ ಬರುತ್ತಿವೆ ಎಂದು ಹೇಳಿದರು.

ಪ್ರಾಚೀನ ಕಾಲದ ಪ್ಲೇಗ್‍ನಿಂದ ಹಿಡಿದು ಆಧುನಿಕ ಕಾಲದ ಏಡ್ಸ್(ಎಚ್‍ಐವಿ) ಹಾಗೂ ಜೈವಿಕ ಯುದ್ಧ ಮುಂತಾದವುಗಳು ವಿಶ್ವದಾದ್ಯಂತ ತಮ್ಮ ದುಷ್ಪರಿಣಾಮಗಳನ್ನು ಬೀರಿವೆ. ಸಾಂಕ್ರಾಮಿಕ ರೋಗಗಳಿಂದುಂಟಾಗುವ ಪರಿಣಾಮಗಳನ್ನು ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲವಾದರೂ ಅವುಗಳ ದುಷ್ಪರಿಣಾಮಗಳನ್ನು ಅಲ್ಲಗಳೆಯಲು ವೈದ್ಯ ಲೋಕಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಸಾಂಕ್ರಾಮಿಕ ಜ್ವರದ ರೋಗ ನಿಧಾನ ಕುರಿತು ಕಿಮ್ಸ್ ಆಸ್ಪತ್ರೆಯ ಮಾಜಿ ಡೀನ್ ಡಾ.ಎಂ.ಕೆ.ಸುದರ್ಶನ್ ವಿಷಯ ಮಂಡಿಸಿದರು.
ಜ್ವರದ ಕುರಿತಾದ ಮಿಥ್ಯಗಳು ಕುರಿತು ಮಕ್ಕಳ ತಜ್ಞ ಡಾ.ಜಗದೀಶ್ ಚಿನ್ನಪ್ಪ ಪ್ರಬಂಧ ಮಂಡಿಸಿದರು.
ಮಕ್ಕಳ ತಜ್ಞೆ ಡಾ.ಸಂಗೀತಾ ಮಕ್ಕಳ ಶಿಕ್ಷಣ ಹಾಗೂ ನಡವಳಿಕೆ ಕುರಿತು ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ