ಅಪ್ರಾಪ್ತ ಸಹೋದರಿಯಿಬ್ಬರನ್ನು ಅಪಹರಿಸಿ, ಗ್ಯಾಂಗ್ ರೇಪ್: ಓರ್ವ ಆರೋಪಿ ಬಂಧನ

ಅಗರ್ತಲಾ: ಅಪ್ರಾಪ್ತ ಬಾಲಕಿಯರಿಬ್ಬರನ್ನು ಅಪಹರಿಸಿ ಬಂಧಿಸಿಟ್ಟು, ಗ್ಯಾಂಗ್ ರೇಪ್ ನಡೆಸಿರುವ ಘೋರ ಘಟನೆ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ನಡೆದಿದೆ.

34 ವರ್ಷದ ಆಟೋ ಚಾಲಕ ಮೊದಲ ಅಪರಾಧಿಯಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯರಿಬ್ಬರೂ ಸ್ವಂತ ಅಕ್ಕ-ತಂಗಿಯರಾಗಿದ್ದಾರೆ. ನವೆಂಬರ್​ 9ರಂದು ಕೈಲಾಶಹರ್​ ಸೇತುವೆ ಬಳಿ ನಿಂತು ಮನೆಗೆ ಹೋಗಲು ವಾಹನಕ್ಕಾಗಿ ಈ ಸಹೋದರಿಯರು ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಆಟೋವನ್ನು ಹತ್ತಿದ್ದಾರೆ. ಆದರೆ ಆ ಚಾಲಕ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮತ್ತಿಬ್ಬರು ಪುರುಷರನ್ನು ಆಟೋಕ್ಕೆ ಹತ್ತಿಸಿಕೊಂಡಿದ್ದಲ್ಲದೆ, ತನಗೆ ಪರಿಚಯದವರು ಎಂದು ಹೇಳಿಕೊಂಡಿದ್ದಾನೆ.

ಬಳಿಕ ಹುಡುಗಿಯರನ್ನು ಮನೆಗೆ ಬಿಡದೆ ಅವರ ಬಾಯಿಯನ್ನು ಟವೆಲ್​ನಿಂದ ಮುಚ್ಚಿ ಕೋವಾಯ್​ ಜಿಲ್ಲೆಯ ತೇಲಿಯಾಮುರಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಮನೆಯೊಂದರ ಕೋಣೆಯಲ್ಲಿ ಬಾಲಕಿಯರನ್ನು ಬಂಧಿಸಿಟ್ಟು ಸತತ ಎರಡು ದಿನ ಮೂರು ಜನರೂ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಎರಡು ದಿನಗಳಾದ ಬಳಿಕ ಅವರನ್ನು ತೇಲಿಯಾಮುರಾ ರೈಲ್ವೆ ಸ್ಟೇಶನ್​ನಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಬಾಲಕಿಯರು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಕೈಲಾಶಹರ್​ ಮಹಿಳಾ ಪೊಲೀಸ್​ ಠಾಣೆಯ ಅಧಿಕಾರಿ ಸಂಪಾ ದಾಸ್​ ತಿಳಿಸಿದ್ದಾರೆ.

ಸಹೋದರಿಯರ ತಾಯಿ ದೂರಿನ ಮೇರೆಗೆ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಜಾಲಬೀಸಲಾಗಿದೆ.

2 Sisters Allegedly Kidnapped, Gang-Raped, By 3 Men In Tripura

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ