ತಮಿಳುನಾಡಿನಲ್ಲಿ ಗಜ ಚಂಡಮಾರುತದ ಅಬ್ಬರ: ಸಾವಿನ ಸಂಖ್ಯೆ 35ಕ್ಕೇರಿಕೆ

ಚೆನ್ನೈ: ತಮಿಳುನಾಡಿಗೆ ಅಪ್ಪಳಿಸಿರುವ ಗಜ ಚಂಡಮಾರುತ ಭಾರೀ ಅನಾಹುತಗಳನ್ನು ಸೃಷ್ಟಿಸಿದ್ದು, ಚಂಡಮಾರುತಕ್ಕೆ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ನಾಗಪಟ್ಟಿಣಂ ಮತ್ತು ವೇದರಣ್ಯಂ ನಡುವೆ ತಮಿಳುನಾಡು ತೀರದ ಮೂಲಕ ದಾಟಿ ಹೋದ ಗಜ ಚಂಡಮಾರುತ 5-6 ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮತ್ತು ಸಾವು ನೋವನ್ನು ಉಂಟುಮಾಡಿದೆ. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದ ಚಂಡಮಾರುತದಿಂದ ಹಲವು ಮನೆಗಳು, ಮರಗಿಡಗಳು ಧರೆಗುರುಳಿವೆ. ಎಲೆಕ್ಟ್ರಿಕ್ ಕೇಬಲ್ ಗಳು ಮುರಿದಿವೆ. ಮೊಬೈಲ್ ಟವರ್ ಗಳು, ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳು ಮುರಿದು ನೆಲಕ್ಕುರುಳಿದ್ದರಿಂದ ವಿದ್ಯುತ್ ಮತ್ತು ಸಂವಹನ ಸೇವೆಗಳು ಸಂಪೂರ್ಣ ಹಾನಿಗೀಡಾಗಿವೆ. ಇದುವರೆಗೆ 1,27, 448 ಮರಗಳು ಧರೆಗುರುಳಿವೆ. 1,471 ಗುಡಿಸಲುಗಳು ಭಾಗಶಃ ಮತ್ತು 216 ಮನೆಗಳು ಸಂಪೂರ್ಣ ನಾಶವಾಗಿವೆ.

ನಿನ್ನೆ ಒಂದೇ ದಿನ 13 ಮಂದಿ ಮೃತಪಟ್ಟಿದ್ದು 28 ಜಾನುವಾರುಗಳು ಅಸುನೀಗಿವೆ. ನಾಗಪಟ್ಟಣಂ, ಕಡಲೂರು, ಪುಡುಕೊಟ್ಟೈ, ಕರೈಕಲ್‌, ಕಡಲೂರು, ರಾಮನಾಥಪುರಂ, ತಿರುವಾರೂರು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ರಾಜ್ಯ ಸರಕಾರ ಸಮರೋಪಾದಿಯಲ್ಲಿ ರಕ್ಷಣೆ ಕಾರ್ಯ ಮುಂದುವರಿಸಿದೆ. ಕಡಲು ಕಾವಲು ಪಡೆ, ಎನ್‌ಡಿಆರ್‌ಎಫ್‌ ಪಡೆಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. 80 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 471 ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ನಾಗಪಟ್ಟಿಂ ಜಿಲ್ಲೆಯ ವೇಲಂಕಣ್ಣಿಯಲ್ಲಿ 16ನೇ ಶತಮಾನದ ಚರ್ಚ್ ಹಾನಿಗೀಡಾಗಿದೆ. ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 25 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಪರಿಹಾರ ಘೋಷಿಸಿದ್ದಾರೆ.

ಬೆಳೆ ಹಾನಿ, ಮೀನುಗಾರಿಕೆ ದೋಣಿಗಳು, ಮನೆಗಳು, ಜಾನುವಾರುಗಳುಗಳು ಮೃತಪಟ್ಟ ಬಗ್ಗೆ ಮೌಲ್ಯಮಾಪನ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

Tamil nadu,Gaja Cyclone,hits

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ