ಬಿಜೆಪಿ ಸರಕಾರದವಿದ್ದ ಸಂದರ್ಭದಲ್ಲಿ ಅಡವಿಟ್ಟ ಎಲ್ಲ ಕಟ್ಟಡ ಈ ಆರ್ಥಿಕ ವರ್ಷದಲ್ಲೇ ಹಿಂದಕ್ಕೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡವಿಟ್ಟಿದ್ದ ಕಟ್ಟಡಗಳ ಪೈಕಿ ಇಂದು ಸ್ಲ್ಯಾಟರ್‌ ಹೌಸ್ ಹಾಗೂ ರಾಜಾಜಿನಗರ ಕಾಂಪ್ಲೆಕ್ಸ್‌‌ನನ್ನು ಹಿಡ್ಕೋ ಸಂಸ್ಥೆಯಿಂದ ಹಿಂಪಡೆಯಲಾಯಿತು.

ಈ‌ ಸಂಬಂಧ ಬಿಎಂಆರ್‌ಡಿಎ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಹುಡ್ಕೋ ಸಂಬಂಧ ಈ ಕಟ್ಟಡಗಳ ದಾಖಲೆ ಪತ್ರಗಳನ್ನು ಪಡೆದು ಮಾಧ್ಯಮದೊಂದಿಗೆ ಮಾತನಾಡಿದರು.

ಬಿಜೆಪಿ ಸರಕಾರದವಿದ್ದ ಸಂದರ್ಭದಲ್ಲಿ ಹಣಕಾಸಿನ‌ ಕೊರತೆಯಿಂದಾಗಿ 2,389 ಕೋಟಿ ರು.‌ಮೊತ್ತದ 11 ಕಟ್ಟಡ, ಆಸ್ತಿಗಳನ್ನು ಅಡವಿಟ್ಟಿತ್ತು. ಈ ಪೈಕಿ ಮಲ್ಲೇಶ್ವರ ಮಾರುಕಟ್ಟೆ, ಜಾನ್ಸನ್‌ ಮಾರುಕಟ್ಟೆ, ಮೇಯೋ ಕೋರ್ಟ್‌, ಕೆಂಪೇಗೌಡ ಮ್ಯೂಸಿಯಂ ಗೆ ೧.೦೮೮ ಕೋಟಿ ರು. ಮರುಪಾವತಿಸಿ ಈ ಕಟ್ಟಗಳನ್ನು ವಾಪಾಸ್‌ ಪಡೆದಿದ್ದೇವೆ. ಇದೀಗ ರಾಜಾಜಿನಗರ ಹಾಗೂ ಸ್ಲಾಟರ್ ಹೌಸ್‌ ಟ್ಯಾನರಿ ರಸ್ತೆಯನ್ನು ಹಿಂಪಡೆಯಲಾಗಿದೆ. ಉಳಿದಂತೆ ಕೆ.ಆರ್.‌ಮಾರುಕಟ್ಟೆ , ಪಿಯುಬಿ ಕಟ್ಟಡ, ಪಶ್ಚಿಮ ವಲಯ ಕಚೇರಿ, ಕಲಾಸಿಪಾಳ್ಯ ಮಾರುಕಟ್ಟೆ ಮೇಲಿರುವ 652.43 ಕೋಟಿ ರು.‌ಸಾಲವನ್ನು ಈ ಆರ್ಥಿಕ ವರ್ಷದಲ್ಲಿಯೇ ಮರುಪಾವತಿಸಿ, ಈ ಕಟ್ಟಡಗಳನ್ನು ಹಿಂಪಡೆಯಲಿದ್ದೇವೆ ಎಂದರು.

ಬಿಬಿಎಂಪಿ ಆರ್ಥಿಕವಾಗಿ ಸದೃಢವಾಗುತ್ತಿದೆ‌ ಎಂಬುದಕ್ಕೆ ಅಡವಿಟ್ಟ ಕಟ್ಟಡಗಳನ್ನು ಹಿಂಪಡೆಯುತ್ತಿರುವುದೇ ಸಾಕ್ಷಿಯಾಗಿದೆ. ಬಿಬಿಎಂಪಿ ಬ್ಯಾಂಕ್‌ ಸ್ಟೇಟ್‌ಮೆಂಟ್‌ನಲ್ಲಿಯೂ ಎಸಿಎಆರ್‌ ರೇಟಿಂಗ್‌ನಲ್ಲಿ ಎ ಗ್ರೇಡ್‌ ಸ್ಥಾನ ಪಡೆದುಕೊಂಡಿದೆ.
ಒಟ್ಟಾರೆ ಬಿಬಿಎಂಪಿ ಹಂತಹಂತವಾಗಿ ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದರು.

* 2018-19 ಸಾಲಿನಲ್ಲಿ 3 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ನೀಡಿದ್ದು, ಈ ವರೆಗೂ 2031 ಕೋಟಿ ರು.‌ ಸಂಗ್ರಹವಾಗಿದೆ. ಮಾರ್ಚ್ ಒಳಗಾಗಿ ನಿಗದಿತ ಗುರಿ ತಲುಪಲಿದ್ದೇವೆ. ಹಿಂದಿನ‌ ಆರ್ಥಿಕ ವರ್ಷದ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ‌ ಎಚ್ವರಿಕೆ ನೀಡಿದ್ದೇನೆ. 300 ಕೋಟಿ ರು.ಗೂ ಬಾಕಿ ತೆರಿಗೆ ಸಂಗ್ರಹವಾಗಿದೆ ಎಂದರು.

* ನಿಯಮ ಬಾಹಿರವಾಗಿ ಕಟ್ಟಿದ ಕಟ್ಟಡಗಳ ಮೇಲೆ ಮುಂದಿನ ದಿನಗಳಲ್ಲಿ ದ್ವಿಗುಣ ತೆರಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಕೆಲವರು ಬಿಬಿಎಂಪಿಯಿಂದ ಒಪ್ಪಿಗೆ ಪಡೆದ ರೀತಿಯಲ್ಲಿ ಕಟ್ಟಡ ನಿರ್ಮಿಸದೇ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅಂಥ ಕಟ್ಟಡಗಳ ವಿರುದ್ಧ ಡಬಲ್ ತೆರಿಗೆ ವಿಧಿಸಲಾಗುವುದು. ಒಂದು ವೇಳೆ ಈ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಲು ಮುಂದಾದರೆ ಈ ಪ್ರಕರಣಕ್ಕೆ ಶೇ.೫೦ ರಷ್ಟು ಶುಲ್ಕ ವಿಧಿಸಲು ಕೆಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.

* ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಮೊತ್ತ‌ ಮೂಲ ಸೌಕರ್ಯಗಳ ನಿರ್ವಹಣೆಗೆ ಸಾಕಾಗಲಿದೆ. ಹೊಸ ಯೋಜನೆ, ದೊಡ್ಡ ಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ ರಾಜ್ಯ ಸರಕಾರ ಸಾವಿರಾರು ಕೋಟಿ ರು. ಅನುದಾನ ಘೋಷಿಸಿತ್ತದೆ.

* ರಾಜಕಾಲು ಒತ್ತುವರಿ ಮಾಡಿರುವವರು ಗಣ್ಯರೇ ಆದರೂ, ಒತ್ತುವರಿ ಜಾಗ ಗುರುತಿಸಿ ಶೀಘ್ರವೇ ತೆರವು ಕಾರ್ಯ ಪ್ರಾರಂಭಿಸಲಾಗುವುದು.

* ಇಂದಿರಾ ಕ್ಯಾಂಟೀನ್‌ನಲ್ಲಿ ಕಾಫಿ, ಟೀ ಕೊಡಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ತಿಂಡಿ, ಊಟ ನೀಡಲಾಗುತ್ತಿದ್ದು ಟೀ ಕಾಫಿ ನೀಡಬೇಕೆಂಬ ಬೇಡಿಕೆ ಬಂದಿದೆ.‌ ಅಂತೆಯೇ ಎಲ್ಲ ಕ್ಯಾಂಟೀನ್‌ನಲ್ಲೂ ಶೀಘ್ರವೇ ಪ್ರಾರಂಭಿಸಲಾಗುವುದು. ಇನ್ನು ಇದಕ್ಕೆ ದರ ನಿಗದಿ ಮಾಡಿಲ್ಲ ಎಂದರು.

ಗೋಷ್ಠಿಯಲ್ಲಿ ಮೇಯರ್ ಗಂಗಾಂಭಿಕೆ, ಆಯುಕ್ತ ಮಂಜುನಾಥ್ ಪ್ರಸಾದ್ ಇದ್ದರು.

BBMP,DCM G Parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ