ಶಬರಿಮಲೆ ವಿವಾದ; ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ನೀಡಿದ್ದ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

ನವದೆಹಲಿಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ, ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ, ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್​ ನಡೆಸಲಿದೆ.

ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ, ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪಿಗೆ ಭಕ್ತರು ಮತ್ತು ಹಿಂದೂಪರ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್​ನಲ್ಲಿ ಆರು ದಿನ ತಿಂಗಳ ಪೂಜೆಗಾಗಿ ದೇಗುಲದ ಬಾಗಿಲು ತೆರೆದಾಗ, ಭಕ್ತರು ಮತ್ತು ಹಿಂದುಪರ ಸಂಘಟನೆಗಳು ದೇಗುಲ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿ, ಮಹಿಳೆಯರು ದೇವಸ್ಥಾನ ಪ್ರವೇಶಿಸದಂತೆ ತಡೆ ಹಾಕಿದ್ದರು.

10ರಿಂದ 50 ವರ್ಷದೊಳಗಿನ ಸುಮಾರು 12 ಮಹಿಳೆಯರು ಬೆಟ್ಟ ಹತ್ತಲು ಪ್ರಯತ್ನಿಸಿದರಾದರೂ ಪ್ರತಿಭಟನಾಕಾರರ ವಿರೋಧದಿಂದ ಅದು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಉದ್ವಿಗ್ನಗೊಂಡು, ಹಲ್ಲೆ ಘಟನೆಗಳು ನಡೆದವು. 50 ವರ್ಷದ ಮೇಲ್ಪಟ್ಟ ಮಹಿಳೆಯರ ಪ್ರವೇಶಕ್ಕೂ ಅಡ್ಡಿಪಡಿಸಲಾಯಿತು ಮತ್ತು ಮಹಿಳೆಯರು ತಮ್ಮ ವಯಸ್ಸಿನ ಗುರುತಿನ ಚೀಟಿ ತೋರಿಸಿ, ದೇಗುಲ ಪ್ರವೇಶಿಸಬೇಕಾಯಿತು.

ಆದಾಗ್ಯೂ, ಸುಪ್ರೀಂಕೋರ್ಟ್​ ಸೆಪ್ಟೆಂಬರ್ 28ರಂದು ನೀಡಿದ್ದ ತೀರ್ಪನ್ನು ಅನುಷ್ಠಾನಕ್ಕೆ ತರಲು ಕೇರಳ ಸರ್ಕಾರ ಬದ್ಧ ಎಂದು ಹೇಳಿತ್ತು. ಆದರೆ, ರಾಜಕೀಯ ವಿರೋಧಿ ಪಕ್ಷಗಳು ರಾಜಕೀಯವಾಗಿ ಈ ವಿಷಯವನ್ನು ಬಳಸಿಕೊಂಡು, ಕೇರಳ ಸರ್ಕಾರವನ್ನು ನಿಂದಿಸಿದ್ದವು.

ತೀರ್ಪು ಮರುಪರಿಶೀಲನೆಗೆ ನಾಯರ್​ ಸೇವಾ ಸಮಿತಿ (ಎನ್​ಎಸ್​ಎಸ್​) ಅರ್ಜಿ ಸಲ್ಲಿಸಿದೆ. ಭಕ್ತರ ಧಾರ್ಮಿಕ ನಂಬಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಈ ತೀರ್ಪು ನೀಡಲಾಗಿದೆ. ಅಲ್ಲದೇ ಈ ತೀರ್ಪಿನಲ್ಲಿ ಕಾನೂನು ತೊಡಕುಗಳು ಇವೆ ಎಂದು ಆರೋಪಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ