ಪ್ರಧಾನಿ ಮೋದಿ ಅವರಿಗೆ ದೇಶದ ರೈತರ ಹಿತಾಸಕ್ತಿಗಿಂತ ಉದ್ಯಮಿಗಳ ಕಡೆಗೆ ಹೆಚ್ಚು ಆಸಕ್ತಿ: ರಾಹುಲ್‍ಗಾಂಧಿ ವಾಗ್ದಾಳಿ

ರಾಯ್‍ಪುರ್, ನ.10-ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, 15 ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಕಾವು ಏರುತ್ತಿರುವ ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರದಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ಅವರಿಗೆ ದೇಶದ ರೈತರ ಹಿತಾಸಕ್ತಿಗಿಂತ ಉದ್ಯಮಿಗಳ ಕಡೆಗೆ ಹೆಚ್ಚು ಆಸಕ್ತಿ ಎಂದು ಟೀಕಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಸಾಲದ ಹೊರೆ, ಬೆಳೆ ನಷ್ಟ ಮೊದಲಾದ ಕಾರಣಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಸಾಲ ಮನ್ನಾ ಮಾಡುವ ಯೋಚನೆ ಮೋದಿ ಅವರಿಗಿಲ್ಲ. ಬದಲಿಗೆ ಆಯ್ಕೆ ಮಾಡಿದ 15 ಕೈಗಾರಿಕೋದ್ಯಮಗಳ 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ದಾರಾಳತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಭಾಷಣದುದ್ದಕ್ಕೂ ಕೇಂದ್ರ ಮತ್ತು ಮೋದಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅಧ್ಯಕ್ಷರು, ಬಿಜೆಪಿ ಆಡಳಿತದಿಂದ ಜನರು ಭ್ರಮ ನಿರಸನಗೊಂಡಿದ್ದಾರೆ. ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢ ಮುಂದಿನ ಐದು ವರ್ಷಗಳಲ್ಲಿ ಕೃಷಿ ಕೇಂದ್ರಗಳಾಗಬೇಕು ಎಂಬುದು ನಮ್ಮ ಬಯಕೆ. ಆ ಮೂಲಕ ದೇಶದ ಹಣ್ಣು, ತರಕಾರಿ ಮತ್ತು ಆಹಾರವನ್ನು ಈ ರಾಜ್ಯಗಳು ಒದಗಿಸುವಂತಾಗಬೇಕೆಂದು ಸಲಹೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ