ಶಬರಿಮಲೆ ದೇವಾಲಯಕ್ಕೆ 52 ವರ್ಷದ ಮಹಿಳೆ ಪ್ರವೇಶಿಸುತ್ತಿದ್ದಂತೆ ತೀವ್ರಗೊಂಡ ಪ್ರತಿಭಟನೆ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯೋರ್ವರು ಪ್ರವೇಶಿಸುತ್ತಿದ್ದಂತೆಯೇ ದೇವಾಲಯದ ಆವರಣದಲ್ಲಿ ಪ್ರತಿಭಟನೆ ಮತ್ತೆ ಜೋರಾಗಿದ್ದು, ಪ್ರತಿಭಟನೆ ವೇಳೆ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಗಾಯಗೊಂಡಿದ್ದಾರೆ.

ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಅಯ್ಯಪ್ಪ ಭಕ್ತರು ದೇಗುಲದ ಆವರಣದಲ್ಲಿ ಜಮಾಯಿಸಿದ್ದು, ಮಹಿಳೆಯೊಬ್ಬರು ದೇಗುಲದ ಪವಿತ್ರ ಮೆಟ್ಟಿಲುಗಳ ಹತ್ತಿರ ಬರುತ್ತಿದ್ದಂತೆ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ಆರಂಭವಾಗಿದ್ದು, ಕ್ಯಾಮರಾಮನ್ ಗಾಯಗೊಂಡಿದ್ದಾರೆ.

ತ್ರಿಸ್ಸೂರ್‌ನ ಭಕ್ತೆ ಲಲಿತಾ ಎಂಬವರು ದೇಗುಲ ಪ್ರವೇಶಿಸಲು ಮುಂದಾಗುತ್ತಿದ್ದಂತೆಯೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶವನ್ನು ನೀಡಿದ ಬಳಿಕ ಪ್ರತಿಭಟನೆಗಳು ಹೆಚ್ಚಾಗಿದ್ದು, ಮಹಿಳೆಗೆ 52 ವರ್ಷ ವಯಸ್ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಬಳಿಕ ಪ್ರತಿಭಟನೆ ತಣ್ಣಗಾಗಿದೆ.

ಈ ವೇಳೆ ಮಾತನಾಡಿರುವ ಲಲಿತಾ, ನನಗೆ ಭಯವಿಲ್ಲ. ನಾನು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಲೇಬೇಕು ಎಂದಿದ್ದಾರೆ.

ಮೂರು ವಾರಗಳಲ್ಲಿ ನಿನ್ನೆಯಷ್ಟೇ ಎರಡು ದಿನಗಳ ವಿಶೇಷ ಪೂಜೆಗಾಗಿ ಶಬರಿಮಲೆಯ ದೇಗುಲದ ಬಾಗಿಲು ತೆರೆಯಲಾಗಿದ್ದು, ಪ್ರತಿಭಟನೆಯು ನಡೆಯುವ ಮುನ್ನೆಚ್ಚರಿಕೆಯಿಂದಾಗಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.

ಇನ್ನು ನಿನ್ನೆಯಷ್ಟೇ 25 ವರ್ಷದ ಮಹಿಳೆಯು ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ದೇಗುಲ ಪ್ರವೇಶಿಸಲು ಮುಂದಾದಾಗ ಪಂಬಾ ಬಳಿಯಲ್ಲಿಯೇ ಅವರನ್ನು ತಡೆಯಲಾಗಿದೆ. ನಿನ್ನೆ ಸಂಜೆ ಬಾಗಿಲು ತೆರೆದ ಅಯ್ಯಪ್ಪ ದೇವಾಲಯ ಇಂದು ಸಂಜೆ ಮತ್ತೆ ಮುಚ್ಚಲಿದೆ.

Sabarimala temple, Woman devotee Entry,protest , Cameraperson Injury

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ