ವಿಶೇಷ ಪೂಜೆಗಾಗಿ ತೆರೆದ ಶಬರಿಮಲೆ ದೇವಾಲಯ: ಬಿಗಿ ಪೊಲೀಸ್ ಭದ್ರತೆ

ತಿರುವನಂತಪುರಂ: ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಇಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ದೇವಾಲಯ ತೆರೆದಿದ್ದು, ವಿಶೇಷ ಭದ್ರತೆ ಒದಗಿಸಲಾಗಿದೆ.

ಅಯ್ಯಪ್ಪ ಭಕ್ತಾದಿಗಳು ಸರತಿ ಸಾಲಿನಲ್ಲಿ ಬಂದು ದೇವರದರ್ಶನ ಪಡೆಯುತ್ತಿದ್ದಾರೆ. ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ-ವಿಧಾನಗಳು ಆರಂಭವಾಗಿವೆ. ಮುನ್ನಚ್ಚರಿಕಾ ಕ್ರಮವಾಗಿ ದೇವಾಲಯದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಇನ್ನು ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆಯಲ್ಲಿ ದೇವಾಲಯಕ್ಕೆ ಮಹಿಳೆಯರು ಭೇಟಿ ನೀಡುವ ಸಾಧ್ಯತೆಯಿರುವದರಿಂದ ಮುಂಜಾಗೃತ ಕ್ರಮವಾಗಿ ದೇವಾಲಯಕ್ಕೆ ಭದ್ರತೆ ಹೆಚ್ಚಿಸಲಾಗಿದ್ದು, ಈ ನಡುವೆ ಪಂಡಲಂ ರಾಜ ಮನೆತನದವರು ದೇವಾಲಯದ ಬಳಿ ಅತಿ ಹೆಚ್ಚು ಭದ್ರತೆ ಒದಗಿಸಿರುವುದು ನೋವುಂಟುಮಾಡಿದೆ ಎಂದಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಬೇಕಾಗಿರುವುದು ತುಂಬಾ ಬೇಸರ ತಂದಿದೆ ಎಂದು ರಾಜಕುಟುಂಬ ಹೇಳಿದೆ.

ಇನ್ನು ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ಈಗಾಗಲೇ ಹೇಳಿದ್ದಾರೆ, ಆದರೆ ನಿರ್ಬಂಧಿತ ವಯಸ್ಸಿನ ಮಹಿಳೆಯರ್ಯಾರೂ ದೇವಾಲಯಕ್ಕೆ ತೆರಳಲು ಭದ್ರತೆಗಾಗಿ ಮನವಿ ಸಲ್ಲಿಸಿಲ್ಲ ಎಂದು ಸಚಿವರಿಳಿಸಿದ್ದಾರೆ.

ಕೆಲವು ಮಹಿಳೆಯರು ಇಂದು ಪೂಜೆಗೆ ದೇಗುಲ ಪ್ರವೇಶಿಸಲು ಸಜ್ಜಾಗಿದ್ದು, ಅವರನ್ನು ತಡೆಯುವ ಸಲುವಾಗಿ ಅಲ್ಲಲ್ಲಿ ಅಯ್ಯಪ್ಪನ ಭಕ್ತರ ಪಡೆಗಳೂ ಬೀಡುಬಿಟ್ಟಿವೆ. ಈ ನಿಟ್ಟಿನಲ್ಲಿ ದೇವಾಲಯಕ್ಕೆ ಮಹಿಳೆಯರು ಪ್ರವೇಶ ಮಾಡಿ, ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಶಬರಿಮಲೆ ಸುತ್ತಮುತ್ತ ಭಾರೀ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯೂ ಜಾರಿ ಮಾಡಲಾಗಿದೆ. ಸುಮಾರು 2,300 ಪೊಲೀಸ್ ಸಿಬ್ಬಂದಿಗಳು, 20 ಕಮಾಂಡೊ ಸದಸ್ಯರು ಮತ್ತು 100 ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಅಗತ್ಯಬಿದ್ದರೆ ಶಬರಿಮಲೆ ಸನ್ನಿಧಾನದಲ್ಲಿ ಇನ್ನೂ ಹೆಚ್ಚಿನ ಮಹಿಳಾ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ನ್ನು ನೇಮಕ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Sabarimala Temple, Special Pooja,police security

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ