ನ.5ರಿಂದ ಬಾಗಿಲು ತೆರೆಯಲಿರುವ ಶಬರಿಮಲೆ ಅಯ್ಯಪ್ಪ ದೇವಾಲಯ: ನಿಷೇಧಾಜ್ಞೆ ನಡುವೆ ದರ್ಶನಕ್ಕೆ ಅವಕಾಶಕ್ಕೆ ಸಜ್ಜು

ತಿರುವನಂತಪುರಂ: ನ.5ರಿಂದ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ತೆರೆಯುತ್ತಿದ್ದು, ನಿಷೇಧಾಜ್ಞೆ ನಡುವೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಈ ಮಧ್ಯೆ ಸನ್ನಿಧಾನಂ, ಪಂಪಾ, ನೀಳಕ್ಕಲ್​​ ಹಾಗೂ ಎಲವುಂಕಾಲ್ ನಲ್ಲಿ ನವೆಂಬರ್​​​ 4ರಿಂದ 6ರವರೆಗೆ ಸೆಕ್ಷನ್ 144 ಜಾರಿ ಮಾಡಲು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನ ನಿಯೋಜಿಸಲು ಮುಂದಾಗಿದ್ದಾರೆ.

ಮಹಿಳೆಯರು ಕೂಡ ಶಬರಿಮಲೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿದ ಬಳಿಕ ಕಳೆದ ತಿಂಗಳು ಶಬರಿಮಲೆ ದೇವಾಲಯದ ಬಳಿ ಭಾರೀ ಪ್ರತಿಭಟನೆ ನಡೆದಿತ್ತು. ಈ ವೇಳೆ ಹಿಂಸಾಚಾರ ಪ್ರಕರಣಗಳು ಹಾಗೂ ಅಯ್ಯಪ್ಪ ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿತ್ತು. ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಪ್ರತಿಭಟನಾಕಾರರು ತಡೆದು, ವಾಪಸ್​ ಕಳುಹಿಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಹಲವರು ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ಈವರೆಗೆ 3505 ಮಂದಿಯನ್ನು ಬಂಧಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು 529 ಕೇಸ್​​ಗಳು ದಾಖಲಾಗಿವೆ. ಶಬರಿಮಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್​ ಕ್ರಮದ ಬಗ್ಗೆ ವರದಿ ನೀಡಿವಂತೆ ಕೇರಳ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಶಬರಿಮಲೆ ಸನ್ನಿಧಾನದಲ್ಲಿ ಮತ್ತು ರಾಜ್ಯದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದು, ಹಿಂಸಾಚಾರಗಳು ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ಕೇರಳ ಸರ್ಕಾರ ಹಾಗೂ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಕೈಗೊಂಡಿದೆ.

Sabarimala Temple,Monday,Reopening,Kerala government,restrictions under Section 144

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ