ರಾಷ್ಟ್ರೀಯ ಏಕತಾ ದಿನ ಪ್ರಯುಕ್ತ ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ಸಚಿವರಿಂದ ಪ್ರತಿಜ್ಞಾ ವಿಧಿ ಬೋದನೆ

ಬೆಂಗಳೂರು, ಅ.31-ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಇಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ವಿಧಾನಸೌಧದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ಏಕತಾ ದಿನವನ್ನು ರಾಷ್ಟ್ರಾದ್ಯಂತ ಆಚರಿಸಲಾಗುತ್ತಿದ್ದು, ಇಂದು ವಿಧಾನಸೌಧದಲ್ಲಿ ಕೃಷಿ ಸಚಿವರು ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ನನ್ನ ದೇಶದ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ ಎಂದು ನಾನು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ. ಸರ್ದಾರ್ ವಲ್ಲಭಭಾಯ್ ಪಟೇಲ್‍ರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾನು ನನ್ನದೇ ಆದ ಕೊಡುಗೆಯನ್ನು ನೀಡುತ್ತೇನೆ ಎಂದು ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡುತ್ತಿದ್ದೇನೆ ಎಂಬ ವಿಧಿಯನ್ನು ಬೋಧಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದ ಕೀರ್ತಿ ಸರ್ದಾರ್ ಪಟೇಲ್ ಅವರಿಗೆ ಸಲ್ಲುತ್ತದೆ.ದೇಶ ಕಂಡ ಅಪ್ರತಿಮ ನಾಯಕ ಹಾಗೂ ಉತ್ತಮ ಆಡಳಿತಗಾರರಾದ ಅವರು, ದೇಶದ ಏಕೀಕರಣದಲ್ಲಿ ವಹಿಸಿದ ಪಾತ ಮಹತ್ವದ್ದು ಎಂದು ನುಡಿದರು.
ನಾವೆಲ್ಲ ಅವರ ಸಂದೇಶ ಪಾಲಿಸಬೇಕು, ನಾಡಿನ ಉದ್ದಗಲಕ್ಕೂ ಅವರ ಸಂದೇಶವನ್ನು ಪಸರಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಮೈತ್ರಿ ಕೂಟದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ಗೆಲ್ಲುವ ವಿಶ್ವಾಸವಿದೆ. ಚುನಾವಣೆ ಸಂದರ್ಭದಲಲಿ ಜನರ ಭಾವನೆ ಕಂಡು ಈ ವಿಶ್ವಾಸ ಮೂಡಿದೆ ಎಂದರು.

ಮಿತ್ರಪಕ್ಷಗಳ ನಾಯಕರು ಒಟ್ಟಾಗಿ ಪ್ರಚಾರದಲ್ಲಿ ತೊಡಗಿರುವುದು ಚುನಾವಣೆಗೆ ಹೆಚ್ಚು ಅನುಕೂಲವಾಗಲಿದೆ.ಇದು ಬಿಜೆಪಿಗೆ ಅನುಕೂಲಕರವಾಗಿಲ್ಲ. ಬಿಜೆಪಿಯವರು ನಾವು ಗೆಲ್ಲುತ್ತೇವೆ ಎಂದು ಕೇವಲ ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಯಾರೇ ಆದರೂ ಕೀಳುಮಟ್ಟದಲ್ಲಿ ಮಾತನಾಡಬಾರದು, ವೈಯಕ್ತಿಕ ವಿಚಾರವನ್ನು ಪ್ರಸ್ತಾಪ ಮಾಡಬಾರದು ಎಂದು ಜನಾರ್ಧನರೆಡ್ಡಿ, ಸಿದ್ದರಾಮಯ್ಯ ಬಗ್ಗೆ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದರು.

ಈ ವಿಚಾರದಲ್ಲಿ ಕ್ಷಮೆ ಕೇಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‍ಭಾಸ್ಕರ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರಸಾದ್, ಜಲಸಂಪನ್ಮೂಲ ಇಲಾಖೆ ಪ್ರಧಾನಕಾರ್ಯದರ್ಶಿ ರಾಕೇಶ್ ಸಿಂಗ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಂಜುಮ್ ಪರ್ವೇಜ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ