ಬೋರ್​ ಆಗುತ್ತದೆ ಎಂದು 100 ಜನರನ್ನು ಕೊಂದ ನರ್ಸ್​!

ಓಲ್ಡೆನ್ಬರ್ಗ್​: ಸಾಮಾನ್ಯವಾಗಿ ನಮಗೆ ಬೋರ್​ ಆದರೆ ಏನು ಮಾಡುತ್ತೇವೆ? ಕೆಲವರು ಪುಸ್ತಕ ಓದುತ್ತಾರೆ, ಸಂಗೀತ ಕೇಳುತ್ತಾರೆ, ಡ್ಯಾನ್ಸ್​ ಮಾಡುತ್ತಾರೆ, ಟಿವಿ ನೋಡುತ್ತಾರೆ, ಮೊಬೈಲ್​ನಲ್ಲಿ ಗೇಮ್​ ಆಡುತ್ತಾರೆ, ಯಾರಾದರೂ ಗೆಳೆಯರೊಟ್ಟಿಗೆ ಮಾತನಾಡುತ್ತಾರೆ, ಇನ್ನು ಕೆಲವರು ಶಾಪಿಂಗ್​ ಮಾಡಿ ಕೂಡ ಬೇಸರ ನಿವಾರಿಸಿಕೊಳ್ಳುತ್ತಾರೆ. ಇನ್ನೂ ವಿಚಿತ್ರವೆಂಬಂತೆ ಬೋರ್​ ಆದಾಗಲೆಲ್ಲ ಏನಾದರೂ ತಿನ್ನುವ, ಸಿಕ್ಕವರ ಜೊತೆಗೆ ಜಗಳವಾಡುವವರೂ ಇದ್ದಾರೆ.
ಇಂತಹ ಅಭ್ಯಾಸಗಳನ್ನೇ ನೀವು ‘ಇದ್ಯಾಕೋ ಅತಿಯಾಯ್ತು’ ಅಂತ ಭಾವಿಸಿದ್ದರೆ ಖಂಡಿತ ಈ ಸುದ್ದಿ ಓದಲೇಬೇಕು. ಜರ್ಮನ್​ನ ಓರ್ವ ನರ್ಸ್​ ತನಗೆ ಬೋರ್​ ಆಯಿತು ಎಂಬ ಕಾರಣಕ್ಕೆ ಬರೋಬ್ಬರಿ 100 ಜನರ ಜೀವ ತೆಗೆದಿದ್ದಾನಂತೆ!
ಓಲ್ಡನ್​ಬರ್ಗ್​ನಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸಿದ್ದ ನೀಲ್ಸ್​ ಹೋಗಲ್​ ಎಂಬ ವ್ಯಕ್ತಿ 100 ರೋಗಿಗಳ ಜೀವ ತೆಗೆಯುವ ಮೂಲಕ ಸರಣಿ ಹಂತಕ ಎಂಬ ಕುಖ್ಯಾತಿ ಗಳಿಸಿದ್ದಾನೆ. 41 ವರ್ಷದ ಹೋಗಲ್ ತಾನು ಈ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಆತನಿಗೆ ಜೀವಾವಧಿ ಶಿಕ್ಷೆ ನೀಡಿ ಜೈಲಿನಲ್ಲಿ ಇರಿಸಲಾಗಿತ್ತು. ಈಗಾಗಲೇ 10 ವರ್ಷಗಳ ಶಿಕ್ಷೆ ಪೂರ್ಣಗೊಳಿಸಿರುವ ಆತ ತನಗೆ ಬೋರ್​ ಆಗುತ್ತಿದೆ ಎಂಬ ಕಾರಣಕ್ಕೆ ಬೇಕೆಂದೇ ರೋಗಿಗಳಿಗೆ ಓವರ್​ಡೋಸ್​ ಔಷಧಗಳನ್ನು ನೀಡಿ ಅವರ ಸಾವಿಗೆ ಕಾರಣವಾಗಿದ್ದ.
100 ರೋಗಿಗಳಿಗೂ ಈತ ಇದೇ ಕ್ರಮವನ್ನು ಅನುಸರಿಸಿದ್ದ. ಮೊದಲು ಕಾರ್ಡಿಯಾಕ್ ಅರೆಸ್ಟ್​ ಆಗುವಂತೆ ಔಷಧವನ್ನು ಇಂಜೆಕ್ಟ್​ ಮಾಡುತ್ತಿದ್ದ. ಆನಂತರ ಅವರ ಜೀವ ಉಳಿಸಲು ಯಾವ್ಯವಾಉದೋ ಔಷಧಗಳನ್ನು ಪ್ರಯೋಗ ಮಾಡುತ್ತಿದ್ದ. ತನ್ನ ವೈದ್ಯಕೀಯ ಕೌಶಲವನ್ನು ತೋರಿಸಿಕೊಳ್ಳುವ ಉದ್ದೇಶದಿಂದ ಹೋಗಲ್​ ಈ ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಈ ರೀತಿಯಾಗಿ ಆತನಿದ್ದ ಆಸ್ಪತ್ರೆಗೆ ದಾಖಲಾದ 34ರಿಂದ 96 ವರ್ಷದ ಒಟ್ಟು 100 ರೋಗಿಗಳು ಹೋಗಲ್​ನಿಂದ ಸಾವನ್ನಪ್ಪಿದ್ದಾರೆ.
ಮೊದಲು ಈ ರೀತಿಯಾಗಿ ಐವರನ್ನು ಹೋಗಲ್​ ಸಾಯಿಸಿದ್ದಾರೆ ಎಂದು ನ್ಯಾಯಾಲಯ ಆತನಿಗೆ 15 ವರ್ಷ ಜೈಲು ಶಿಕ್ಷೆ ನೀಡಿತ್ತು. ಆದರೆ, ನಂತರ ಆತನನ್ನು ಕೌನ್ಸಿಲಿಂಗ್​ಗೆ ಒಳಪಡಿಸಿದಾಗ ಮನಶಾಸ್ತ್ರಜ್ಞರ ಬಳಿ ತಾನು ಹೀಗೆ ಸರಣಿ ಕೊಲೆಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಜೀವಾವಧಿ ಶಿಕ್ಷೆ ನೀಡಲಾಯಿತು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ