ಹೈದರಾಬಾದ್ನ ಕನ್ನಡ ಭವನದಲ್ಲಿ ಕನ್ನಡ ರಾಜ್ಯೋತ್ಸವ

ಹೈದರಾಬಾದ್, ಅ.31- ಕನ್ನಡ ರಾಜ್ಯೋತ್ಸವವು ನಾಡು ನುಡಿ ಸಂಸ್ಕøತಿಯನ್ನು ಸಾರುವ ಹಬ್ಬವಂತಾಗಬೇಕು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಸಿ ಮಾತನಾಡಿದ ಅವರು, ಕನ್ನಡ ಭಾಷೆ ಮತ್ತು ಪರಂಪರೆಯ ಇತಿಹಾಸ ವಿಶ್ವದಲ್ಲಿಯೇ ಪ್ರಸಿದ್ಧಿಯಾಗಿದೆ. ಹೀಗಾಗಿ ಕನ್ನಡ ರಾಜ್ಯೋತ್ಸವವನ್ನು ಬೇರೆ ರಾಜ್ಯಗಳಲ್ಲೂ ಆಚರಿಸುವ ಮೂಲಕ ನಮ್ಮ ಕನ್ನಡತನದ ಕಂಪನ್ನು ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಇತಿಹಾಸದಲ್ಲಿ ಕನ್ನಡಕ್ಕೆ ಅದರದ್ದೇ ಆದಂತಹ ವಿಶೇಷ ಗೌರವ, ವಿಶೇಷ ಸ್ಥಾನಮಾನವಿದೆ. ಇಲ್ಲಿ ಭಾಷೆಗೆ ಪ್ರಾಮುಖ್ಯತೆ ಕೊಡಬೇಕು. ನಾಡು-ನುಡಿ ಜೊತೆಗೆ ದೇಶಾಭಿಮಾನವನ್ನು ಕೂಡ ಬೆಳೆಸಿಕೊಳ್ಳಬೇಕು. ನಾವು ಭಾರತೀಯರು, ನಾವೆಲ್ಲಾ ಒಂದೇ, ಹಾಗೆಂದ ಮಾತ್ರಕ್ಕೆ ನಾವು ನಾಡು-ನುಡಿಗೆ ಸಮಸ್ಯೆ ಬಂದಾಗ ಸುಮ್ಮನೇ ಕೈ ಕಟ್ಟಿ ಕೂರಲ್ಲ ಎಂದು ತಿಳಿಸಿದರು.

ನಾವು ಎಲ್ಲೇ ಇದ್ದರೂ ಕನ್ನಡತನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹೈದ್ರಾಬಾದ್‍ನಲ್ಲಿ ಆಯೋಜಿಸಿರುವ ಈ ಕನ್ನಡ ರಾಜ್ಯೋತ್ಸವಕ್ಕೆ ಇಲ್ಲಿನ ಅನಿವಾಸಿ ಕನ್ನಡಿಗರ ಬಂದಿದ್ದು, ಅವರೆಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಇದಕ್ಕೂ ಮೊದಲು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರ ನೇತೃತ್ವದಲ್ಲಿ ಇಲ್ಲಿನ ಕನ್ನಡ ಸಂಘಟನೆಗಳ ಒಕ್ಕೂಟದ ಜೊತೆಗೂಡಿ ಕನ್ನಡ ಸೇನೆ ಬೃಹತ್ ಮೆರವಣಿಗೆ ನಡೆಸಿತು. ಈ ವೇಳೆ ಡೊಳ್ಳು ಕುಳಿತ, ಕಂಸಾಳೆ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನ ನೀಡಿದವು.
ಇನ್ನು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು, ಹೈದ್ರಾಬಾದ್ ಕನ್ನಡ ಸಂಘಟನೆಗಳ ಮುಖಂಡರು, ಅನಿವಾಸಿ ಕನ್ನಡಿಗರು ಭಾಗವಹಿಸಿದ್ದರು.

ಇದೇ ವೇಳೆ ಕನ್ನಡ ರಾಜೋತ್ಸವ ಮುನ್ನಾ ದಿನ ಅಂದರೆ ಅ.31ರಂದೇ ಹೈದ್ರಾಬಾದ್‍ನಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ