ಉಪಚುನಾವಣೆಗೂ ಮುನ್ನ ಶಿವಮೊಗ್ಗದಲ್ಲಿ ಮೈತ್ರಿ ಕೂಟಕ್ಕೆ ಸಿಹಿ ಸುದ್ಧಿ

Varta Mitra News

ಬೆಂಗಳೂರು, ಅ.31- ಲೋಕಸಭಾ ಉಪಚುನಾವಣೆಗೂ ಮುನ್ನ ಮೈತ್ರಿ ಕೂಟಕ್ಕೆ ಶಿವಮೊಗ್ಗದಲ್ಲಿ ಸಿಹಿ ಸುದ್ದಿ ದೊರೆತಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯತ್‍ನಲ್ಲಿ ಮಿತ್ರ ಪಕ್ಷಗಳ ಕೈ ಮೇಲಾಗಿದೆ.
ಇಲ್ಲಿನ ಆವಿನಹಳ್ಳಿ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮನೇರಿ ಶಿವಪ್ಪ 530 ಮತಗಳ ಅಂತರದಿಂದ ಜಯಗಳಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಸಹೋದರನ ಮಗ ಬಿ.ಟಿ.ರವಿ ಸೋಲು ಕಂಡಿದ್ದಾರೆ.

ಕಾಗೋಡು ಅಣ್ಣಾಜಿ ನಿಧನದಿಂದ ತೆರವಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಸೆ.29ರಂದು ಉಪ ಚುನಾವಣೆ ನಡೆದಿತ್ತು.ಇಂದು ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ.

31 ಸ್ಥಾನ ಬಲದ ಜಿಲ್ಲಾ ಪಂಚಾಯ್ತಿನಲ್ಲಿ ಬಿಜೆಪಿ 15, ಕಾಂಗ್ರೆಸ್-ಜೆಡಿಎಸ್ 15 ಸ್ಥಾನ ಹೊಂದಿದ್ದವು.ಈ ಗೆಲುವಿನೊಂದಿಗೆ ಮೈತ್ರಿ ಪಕ್ಷಗಳ ಬಲ 16ಕ್ಕೇರಿದೆ.
ಬಂಟ್ವಾಳ ವರದಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಂಗಬೆಟ್ಟು ತಾಲೂಕು ಪಂಚಾಯತ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಪ್ರಭು 1089 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಪ್ರತಿಸ್ಪರ್ಧಿ ದಿನೇಶ್ ಸುಂದರ ಶಾಂತಿ 2850 ಮತಗಳನ್ನು ಗಳಿಸುವ ಮೂಲಕ ಪರಾಜಯಗೊಂಡರೆ, 51 ನೋಟಾ ಮತಗಳು ಚಲಾವಣೆಯಾಗಿವೆ. ಕಳೆದ ಸಂಗಬೆಟ್ಟು ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದು, ಇದೀಗ ಕ್ಷೇತ್ರ ಬಿಜೆಪಿಯ ಪಾಲಾಗಿದೆ.
ಬಿ.ಸಿ.ರೋಡ್‍ನ ಮಿನಿ ವಿಧಾನಸೌಧದಲ್ಲಿ ಮತ ಎಣಿಕಾ ಪ್ರಕ್ರಿಯೆ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ