ಮಾಜಿ ಉಪಮುಖ್ಯ ಮಂತ್ರಿ ಅರ್.ಅಶೋಕ್ ಬಗ್ಗೆ ಪಕ್ಷದ ವಲಯದಲ್ಲಿ ಅಸಮಾಧಾನ

ಬೆಂಗಳೂರು,ಅ.30-ಹಳೆ ಮೈಸೂರು ಭಾಗದ ಹೃದಯ ಭಾಗವಾಗಿರವ ಮಂಡ್ಯ ಲೋಕಸಭಾ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಬಿಜೆಪಿ ಅಭ್ಯರ್ಥಿ ಪರ ನಿರೀಕ್ಷೆಯಂತೆ ಪ್ರಚಾರ ಮಾಡುವಲ್ಲಿ ವಿಫಲರಾಗಿದ್ದು, ಈ ಬಗ್ಗೆ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಅಶೋಕ್ ನಡೆ ಬಿಜೆಪಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಹಳೆ ಮೈಸೂರು ಭಾಗ ಜೆಡಿಎಸ್‍ನ ಭದ್ರ ಕೋಟೆಯಾಗಿದೆ. ಇಲ್ಲಿ ಬಿಜೆಪಿ ತಳವೂರಲು ಹರಸಾಹಸಪಡುತ್ತಿದೆ.

ಉಪಚುನಾವಣೆಯನ್ನೇ ವೇದಿಕೆಯಾಗಿ ಬಳಸಿಕೊಳ್ಳಲು ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿರುವ ಮಂಡ್ಯ ಕ್ಷೇತ್ರದ ಉಸ್ತುವಾರಿಯನ್ನು ಬಿಜೆಪಿಯ ಮಾಜಿ ಡಿಸಿಎಂ ಆರ್.ಅಶೋಕ್‍ಗೆ ವಹಿಸಲಾಗಿತ್ತು. ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಪ್ರಚಾರದ ತಂತ್ರಗಾರಿಕೆವರೆಗೂ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿತ್ತು.ಆದರೆ ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಡಾ.ಸಿದ್ದರಾಮಯ್ಯ ಅವರನ್ನು ಕರೆತಂದು ಅವರಿಗೆ ಟಿಕೆಟ್ ನೀಡಿ ಅಶೋಕ್ ಕೈ ತೊಳೆದುಕೊಂಡಿದ್ದಾರೆ.

ಅಶೋಕ್ ಕಾಟಾಚಾರಕ್ಕೆ ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು, ಉಪಚುನಾವಣೆಯನ್ನು ಅವರು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂಬ ಮಾತುಗಳು ಮಂಡ್ಯ ಜಿಲ್ಲಾ ಬಿಜೆಪಿ ನಾಯಕರಿಂದ ಕೇಳಿ ಬರುತ್ತಿದೆ.

ಬಿಜೆಪಿ ಅಭ್ಯರ್ಥಿ ಗೆಲುವು ಕಠಿಣವಾದರೂ ಒಕ್ಕಲಿಗ ಮತಗಳನ್ನು ಸೆಳೆದು ಪಕ್ಷದ ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಇದರಿಂದ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರಲ್ಲಿದ್ದ ಬಿಜೆಪಿ ಅಶೋಕ್ ಹೆಗಲಿಗೆ ಉಸ್ತುವಾರಿ ನೀಡಿದೆ.
ಆದರೆ ಚುನಾವಣಾ ಉಸ್ತುವಾರಿಯಾಗಿ ಕ್ಷೇತ್ರದಿಂದಲೇ ಕಾಣೆಯಾಗಿದ್ದಾರೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಕಮಲ ಪಾಳಯದ ಪಡಸಾಲೆಯಲ್ಲಿಯೇ ಚರ್ಚೆಯಾಗುತ್ತಿದೆ.

ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ಅಶೋಕ್‍ಗೆ ನೀಡಿದ್ದ ಜವಾಬ್ದಾರಿಯಿಂದ ಲಾಭದ ಬದಲು ನಷ್ಟವೇ ಹೆಚ್ಚಾಗಲಿದೆ ಎನ್ನುವ ಮಾಹಿತಿ ಬಂದಿದೆ. ಇದೀಗ ಅಶೋಕ್ ಪ್ರಚಾರ ವೈಖರಿಯಲ್ಲಿ ತಳೆದಿರುವ ಧೋರಣೆಯಿಂದ ಬೇಸತ್ತಿರುವ ರಾಜ್ಯ ಬಿಜೆಪಿ ನಾಯಕರು ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಲಿದ್ದಾರೆ ಎನ್ನಲಾಗಿದೆ.

ಹೊಂದಾಣಿಕೆ ಮಾಡಿಕೊಂಡು ಅಶೋಕ್ ರಾಜಕಾರಣ ಮಾಡುತ್ತಾರೆ, ಅಡ್ಜಸ್ಟ್ ಮೆಂಟ್ ಪೆÇಲಿಟೀಷಿಯನ್ ಎನ್ನುವ ಮಾತುಗಳು ಅಶೋಕ್ ವಿರುದ್ಧ ಪದೇ ಪದೇ ಕೇಳಿ ಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಬಿಜೆಪಿ ನಾಯಕರು ಈ ಬಾರಿ ದೂರು ನೀಡಬೇಕು ಎನ್ನುವ ನಿಲುವು ತಳೆದಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ