ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ನವಂಬರ್ 1ರಂದು ವ್ಯೆಭವಯುತ ರಾಜ್ಯೋತ್ಸವ

ಬೆಂಗಳೂರು, ಅ.30- ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವೈಭವಯುತವಾಗಿ ಕನ್ನಡ ರಾಜ್ಯೋತ್ಸವವನ್ನು ನ.1ರಂದು ಹಮ್ಮಿಕೊಂಡಿದೆ.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ವೈಭವವಾಗಿ ಜನಪದ ಕಲೆ, ಸಂಸ್ಕøತಿಗಳನ್ನು ಅನಾವರಣಗೊಳಿಸುತ್ತಾ ನಾಡಿನ ದಿಗ್ಗಜರನ್ನು , ಸಾಧಕರನ್ನು ಸನ್ಮಾನಿಸಲಾಗುತ್ತಿದೆ.

ಚಾಮರಾಜಪೇಟೆಯ ಎರಡನೆ ಅಡ್ಡರಸ್ತೆ, ಮೂರನೆ ಮುಖ್ಯ ರಸ್ತೆಯಲ್ಲಿ ಅಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಲಿದ್ದಾರೆ.

ಸಂಸದ ಪಿ.ಸಿ.ಮೋಹನ್, ಸಚಿವರಾದ ಜಮೀರ್ ಅಹಮದ್ ಖಾನ್, ಶಾಸಕರಾದ ರಾಮಲಿಂಗಾರೆಡ್ಡಿ , ಸೌಮ್ಯ ರೆಡ್ಡಿ , ಆರ್.ವಿ.ದೇವರಾಜ್, ರಿಜ್ವಾನ್ ಅರ್ಷದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯದರ್ಶಿ ಜಿ.ಎ.ಭಾವ, ಪಾಲಿಕೆ ಸದಸ್ಯರಾದ ಕೋಕಿಲಾ ಚಂದ್ರಶೇಖರ್, ಸುಜಾತಾ.ಡಿ.ಸಿ.ರಮೇಶ್, ಗೌರಮ್ಮ ಗೋವಿಂದರಾಜು , ಅಸಂಘಟಿತ ಕಾರ್ಮಿಕರ ಇಲಾಖೆಯ ನಿರ್ದೇಶಕ ಗಜೇಂದ್ರ ಕುಮಾರ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ.

ರಾಜ್ಯೋತ್ಸವದ ಧ್ವಜಾರೋಹಣದ ನಂತರ ಚಾಮರಾಜಪೇಟೆಯ ಮುಖ್ಯ ರಾಜ ಬೀದಿಗಳಲ್ಲಿ ಶ್ರೀ ರಾಜರಾಜೇಶ್ವರಿ , ಮಲೆ ಮಹದೇಶ್ವರ ಸ್ವಾಮಿ , ಆದಿಪರಾಶಕ್ತಿ ಅಮ್ಮ , ಆದಿ ಶಕ್ತಿ ಚಿಕ್ಕಣ್ಣಮ್ಮ ದೇವರ ಮೆರವಣಿಗೆ ನಡೆಸಲಾಗುತ್ತದೆ.

ಜಾನಪದ ಕಲಾ ತಂಡಗಳಾದ ನಾಗಮಂಗಲದ ಮಹದೇವಪ್ಪ ಮತ್ತು ತಂಡದ ಕಲಾವಿದರು, ಹೆಬ್ಬಣಿ ಲಿಂಗರಾಜು ತಂಡ , ಹೊನ್ನಳಮ್ಮ ನಟರಾಜು ತಂಡ , ಮಂಗಳೂರಿನ ಹೊಳ್ಳ ತಂಡ ಹಾಗೂ ಚಿಲಿಪಿಲಿ ನೃತ್ಯ , ಯಕ್ಷಗಾನ ಮತ್ತು ಹಾಸ್ಯ ಬೊಂಬೆ ಪ್ರದರ್ಶನವು ಮೆರವಣಿಗೆಯಲ್ಲಿ ಸಾಗಲಿದೆ.

ಈ ತಂಡಗಳು ವೀರಗಾಸೆ , ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ, ತೋಮಲ ಕುಣಿತ, ಗೊರವರ ಕುಣಿತ, ಜಗ್ಗಲಿಗೆ ಮೇಳ, ಕಂಸಾಳೆ , ಹಗಲುವೇಷ, ಕೇರಳ ಚಂಡೆ ಮೇಳ, ಯಕ್ಷಗಾನ ವೇಷಗಳು, ರಾಜ-ರಾಣಿ ಕುದುರೆ , ಕರಗ ನೃತ್ಯ, ನವಿಲು ನೃತ್ಯ , ಹಾಸ್ಯದ ಬೊಂಬೆಗಳು, ಹುಲಿ ವೇಷ , ಸಿಂಹ ನೃತ್ಯ ಈ ಎಲ್ಲಾ ತಂಡದ ಜತೆಯಲ್ಲಿ ವಾದ್ಯ ಪರಿಕರ ಮತ್ತು ಸ್ವಾಗತವು ವರ್ಣರಂಜಿತವಾಗಿರುತ್ತದೆ.
ಶ್ರೀ ರಾಘವೇಂದ್ರ ತಂಡದವರಿಂದ ನಾದಸ್ವರ, ಸಾಂಸ್ಕøತಿಕ ಕಾರ್ಯಕ್ರಮವಿರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ