75 ಶತಕೋಟಿ ಡಾಲರ್‌ ಕರೆನ್ಸಿ ವಿನಿಮಯ ಒಪ್ಪಂದ, 2+2 ಮಾತುಕತೆಗೆ ಭಾರತ-ಜಪಾನ್‌ ಒಪ್ಪಿಗೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಜತೆ ತಮ್ಮ ಐದನೇ ಶೃಂಗಸಭೆ ಮುಕ್ತಾಯಗೊಳಿಸಿದ್ದು, ಉಭಯ ದೇಶಗಳು ಮಹತ್ವದ 75 ಶತಕೋಟಿ ಡಾಲರ್‌ ಮೌಲ್ಯದ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ರೂಪಾಯಿ ಹಾಗೂ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಸ್ಥಿರತೆ ಉಂಟುಮಾಡುವ ಉದ್ದೇಶ ಹೊಂದಿದೆ.

ಭಾರತ-ಜಪಾನ್ ನಡುವೆ ಹೆಚ್ಚುತ್ತಿರುವ ವ್ಯೂಹಾತ್ಮಕ ಏಕತೆಯಿಂದ ಉಭಯ ದೇಶಗಳಿಗೂ ಅನುಕೂಲವಾಗಿದ್ದು, ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಸಚಿವರ ಮಟ್ಟದಲ್ಲಿ 2+2 ಮಾತುಕತೆ ಆರಂಭಿಸಲು ಒಮ್ಮತ ವ್ಯಕ್ತಪಡಿಸಿವೆ. ಬಾಂಗ್ಲಾದೇಶ, ಮ್ಯಾನ್ಮಾರ್‌ ಮತ್ತು ಶ್ರೀಲಂಕಾಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಉಭಯ ದೇಶಗಳು ಜಂಟಿಯಾಗಿ ಕಾರ್ಯತಂತ್ರ ರೂಪಿಸುವ ಮೂಲಕ ಇಂಡೋ-ಪೆಸಿಫಿಕ್ ನೀತಿಗಳಲ್ಲಿ ಗಣನೀಯ ಪ್ರಾಬಲ್ಯ ಸಾಧಿಸಿವೆ.

‘ಕರೆನ್ಸಿ ವಿನಿಮಯ ಒಪ್ಪಂದದಿಂದ ‘ಭಾರತದಲ್ಲಿ ಲಭ್ಯವಿರುವ ವಿದೇಶಿ ಬಂಡವಾಳವನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಅವಕಾಶ ದೊರೆಯಲಿದೆ’ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

2013ರಲ್ಲೂ ರೂಪಾಯಿ ತೀವ್ರ ಒತ್ತಡದಲ್ಲಿದ್ದಾಗ ಭಾರತ ಮತ್ತು ಜಪಾನ್‌ಗಳು ಕರೆನ್ಸಿ ವಿನಿಮಯವನ್ನು 15 ಶತಕೋಟಿ ಡಾಲರ್‌ಗಳಿಂದ 50 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಂಡಿದ್ದವು.

ಉಭಯ ನಾಯಕರ ಶೃಂಗಸಭೆಯ ಬಳಿಕ ಬಿಡುಗಡೆ ಮಾಡಿದ ಭಾರತ- ಜಪಾನ್ ಮುನ್ನೋಟ ಹೇಳಿಕೆಯಲ್ಲಿ, ಕರೆನ್ಸಿ ವಿನಿಮಯವನ್ನು ಸ್ವಾಗತಿಸಲಾಗಿದೆ. ಚಾಲ್ತಿ ಖಾತೆಯ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳುವಲ್ಲಿ ಈ ಕರೆನ್ಸಿ ವಿನಿಮಯ ಒಪ್ಪಂದ ಧನಾತ್ಮಕ ಪರಿಣಾಮ ಬೀರಲಿದೆ. ನಮ್ಮ ಹಣಕಾಸು ಮತ್ತು ಕರೆನ್ಸಿ ಮಾರುಕಟ್ಟೆಗೆ ಇದು ಬಲವಾದ ಸಂಕೇತಗಳನ್ನು ನೀಡಲಿದೆ’ ಎಂದು 15ನೇ ಹಣಕಾಸು ಆಯೋಗದ ಸದಸ್ಯ ಶಕ್ತಿಕಾಂತ ದಾಸ್‌ ಟ್ವೀಟ್ ಮಾಡಿದ್ದಾರೆ.

ಶೃಂಗಸಭೆಯಲ್ಲಿ ಉಭಯ ನಾಯಕರು ಭಾನುವಾರ ದಿನಪೂರ್ತಿ ಹಲವು ಸುತ್ತಿನ ಅನೌಪಚಾರಿಕ ಮಾತುಕತೆ ಹಾಗೂ ನಿಯೋಗ ಮಟ್ಟದ ಮತ್ತು ಉದ್ಯಮಿಗಳ ಮಟ್ಟದ ಮಾತುಕತೆಗಳನ್ನು ನಡೆಸಿದರು. ಇದರಿಂದಾಗಿ ‘ಭಾರತ-ಜಪಾನ್ ಬಾಂಧವ್ಯಗಳಲ್ಲಿ ಹೊಸ ಶಕೆ’ ಎಂಬ ಮುನ್ನೋಟ ಹೇಳಿಕೆ ಹೊರಬಿದ್ದಿದ್ದು, ‘ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಸಹಕಾರ’ ವೃದ್ಧಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ