ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಯಾಗುವುದಿಲ್ಲ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಬಾಗಲಕೋಟೆ, ಅ.29- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಹ್ಮ ಬಂದರೂ ಮತ್ತೆ ಮುಖ್ಯಮಂತ್ರಿ ಯಾಗುವುದಿಲ್ಲ. ನೀವು ಹಂದಿಯನ್ನಾದರೂ ತಿನ್ನಿ, ದನದ ಮಾಂಸವನ್ನಾದರೂ ತಿನ್ನಿ. ಮೊದಲು ಮನುಷ್ಯರು ತಿನ್ನುವುದನ್ನು ಕಲಿಯಿರಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಜಮಖಂಡಿಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ವಾಸ್ತವವಾಗಿ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವುದು ನೀವು ಬ್ರಹ್ಮ ಬಂದರೂ ಮತ್ತೆ ಮುಖ್ಯಮಂತ್ರಿ ಯಾಗುವುದಿಲ್ಲ. ಮೊದಲು ಕನಸು ಕಾಣುವುದನ್ನು ಬಿಡಿ ಎಂದು ಕುಹಕವಾಡಿದರು.
ಚಾಮುಂಡೇಶ್ವರಿಯಲ್ಲಿ ನನ್ನನ್ನು ರಾಹು, ಕೇತು, ಶನಿ ಸೇರಿಕೊಂಡು ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನನ್ನ ಪ್ರಕಾರ ಶನಿ ಎಂದರೆ ಮಾಜಿ ಪ್ರಧಾನಿ ದೇವೇಗೌಡರು, ರಾಹು ಎಂದರೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇತು ಎಂದರೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇರಬೇಕೆಂದು ವ್ಯಂಗ್ಯವಾಡಿದರು.

ಶನಿ ಪಕ್ಷದವರ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡಿರುವ ಸಿದ್ದರಾಮಯ್ಯನವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಯಡಿಯೂರಪ್ಪ ಸಿಎಂ ಆಗಬೇಕೋ ಬೇಡ ಎಂಬುದನ್ನು ಜನತೆ ತೀರ್ಮಾನಿಸುತ್ತಾರೆ. ನಿಮಗೇಕೆ ಅವರ ಬಗ್ಗೆ ಚಿಂತೆ ಎಂದು ಪ್ರಶ್ನಿಸಿದರು.
ಏನಾದರೂ ತಿನ್ಕೊಳ್ಳಿ: ನಾನು ದನದ ಮಾಂಸ ತಿನ್ನುತ್ತೇನೆ ಎಂದು ಸೊಕ್ಕಿನಿಂದ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಂದಿಯನ್ನಾದರೂ ತಿನ್ನಿ! ದನವನ್ನಾದರೂ ತಿನ್ನಿ. ನಮಗೆ ಅದರ ಬಗ್ಗೆ ಚಿಂತೆಯಿಲ್ಲ. ಮೊದಲು ಮನುಷ್ಯರು ತಿನ್ನುವುದನ್ನು ಕಲಿಯಿರಿ ಎಂದು ತಿರುಗೇಟು ನೀಡಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲು ಎರಡು ಪಕ್ಷಗಳು ಒಂದಾಗಿವೆ ಎಂದು ದೂರಿದರು.
ಎರಡೂ ಪಕ್ಷಗಳು ಹಾದಿಬೀದಿಯಲ್ಲಿ ಹಾವು-ಮುಂಗೂಸಿಯಂತೆ ಕಿತ್ತಾಡಿಕೊಂಡವರು ಒಂದಾಗಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಬೆನ್ನಿಗೆ ಕುಮಾರಸ್ವಾಮಿ ಚೂರಿ ಹಿಡಿದುಕೊಂಡೇ ನಿಂತಿದ್ದಾರೆ. ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಲು ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ. ಇಂಥವರು ಒಂದಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಎಲ್ಲ ಕಡೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ನ.6ರಂದು ಫಲಿತಾಂಶ ಪ್ರಕಟವಾದ ನಂತರ ಮೈತ್ರಿ ಸರ್ಕಾರ ಪತನವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಭವಿಷ್ಯ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ