ವಾಹನಗಳ ಸಂಖ್ಯೆಯಲ್ಲೂ ನಂಬರ್ 1 ಆದ ಸಿಲಿಕಾನ್ ಸಿಟಿ

ಬೆಂಗಳೂರು, ಅ.1- ಸಿಲಿಕಾನ್ ಸಿಟಿ ಬೆಂಗಳೂರು ಜನಸಂಖ್ಯೆಗೆ ಮಾತ್ರವಲ್ಲ ವಾಹನಗಳ ಸಂಖ್ಯೆಯಲ್ಲೂ ನಂಬರ್ 1 ಆಗಿ ಗುರುತಿಸಿಕೊಂಡಿದೆ.
ಸಾರಿಗೆ ಇಲಾಖೆ ಹೊರಡಿಸಿರುವ ವರದಿಯ ಪ್ರಕಾರ ಜುಲೈ 31ರ ವೇಳೆಗೆ ರಾಜ್ಯದಲ್ಲಿ ವಾಹನಗಳ ಸಂಖ್ಯೆ 1.99 ಲಕ್ಷದಷ್ಟಿದ್ದು ಅದು ಈಗ 2 ಕೋಟಿಯ ಗೆರೆಯನ್ನು ದಾಟಿದೆ.

ಕಳೆದ 7 ವರ್ಷಗಳಿಂದ ವಾಹನಗಳ ಸಂಖ್ಯೆಯಲ್ಲಿ 100ರಷ್ಟು ಏರಿಕೆಯಾಗಿದ್ದು, ಪ್ರತಿ ವರ್ಷ 8 ರಿಂದ 10 ರಷ್ಟು ಏರಿಕೆಯಾಗುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯಕ್ಕೆ 2 ಕೋಟಿಗೆ ಮುಟ್ಟಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‍ಟಿಓ) 10 ವಲಯಗಳನ್ನು ಹೊಂದಿದ್ದು, ಈ ವಲಯದಲ್ಲೇ 76.2 ಲಕ್ಷ ವಾಹನಗಳಿದ್ದು ನಂಬರ್ 1 ಸ್ಥಾನದಲ್ಲಿ ಗುರುತಿಸಿಕೊಂಡಿದ್ದರೆ, ಬೆಳಗಾವಿ ಸಾರಿಗೆ ವಲಯದಲ್ಲಿ (ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ) 35.7 ಲಕ್ಷ, ಶಿವಮೊಗ್ಗ (ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು)ದಲ್ಲಿ 29.9 ಲಕ್ಷ ವಾಹನಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸಾಂಸ್ಕøತಿಕ ರಾಜಧಾನಿ ಮೈಸೂರು ಆರ್‍ಟಿಒ ವಲಯದಲ್ಲಿ 22 ಲಕ್ಷ ವಾಹನಗಳಿದ್ದು ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳು ಒಳಪಡಲಿದ್ದು 4ನೆ ಸ್ಥಾನದಲ್ಲಿದೆ.
ಕಲ್ಬುರ್ಗಿ ಆರ್‍ಟಿಒನಲ್ಲಿ ಕಲ್ಬುರ್ಗಿ, ಬಳ್ಳಾರಿ,ರಾಯಚೂರು, ಕೊಪ್ಪಳ,ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳು ಒಳಪಡಲಿದ್ದು ಇಲ್ಲಿ 19.3 ಲಕ್ಷ ವಾಹನಗಳು ನೋಂದಣಿಯಾಗಿದ್ದರೆ, ಬೆಂಗಳೂರು ಗ್ರಾಮಾಂತರ (ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ) ದಲ್ಲಿ 16.7 ಲಕ್ಷ ವಾಹನಗಳಿವೆ ಎಂದು ಆರ್‍ಟಿಒ ವರದಿಯಿಂದ ತಿಳಿದು ಬಂದಿದೆ.

ಸಾರ್ವಜನಿಕ ವಾಹನಗಳ ನೋಂದಣಿ ಇಳಿಮುಖ:
ರಾಜ್ಯದಲ್ಲಿರುವ ವಿವಿಧ ಆರ್‍ಟಿಒ ಕಚೇರಿಗಳಲ್ಲಿ ನೋಂದಣಿ ಆಗುತ್ತಿರುವ ವಾಹನಗಳ ಸಂಖ್ಯೆಯಲ್ಲಿ ದ್ವಿ ಚಕ್ರ ವಾಹನ ಸಂಖ್ಯೆ 1.44 ಕೋಟಿಗೆ ಮುಟ್ಟಿದ್ದರೆ, ಕಾರುಗಳು 23.7 ಲಕ್ಷದಟ್ಟಿದ್ದರೆ, ಸಾರ್ವಜನಿಕ ವಾಹನಗಳ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಬಸ್ಸುಗಳು (1 ಲಕ್ಷ), ಕ್ಯಾಬ್ (3.3 ಲಕ್ಷ), ಆಟೋರಿಕ್ಷಾಗಳು (4.4 ಲಕ್ಷ)ದಟ್ಟು ನೋಂದಣಿ ಆಗಿದೆ.

4 ನಗರದಲ್ಲಿ 10 ಲಕ್ಷಕ್ಕೂ ಹೆಚ್ಚು ವಾಹನಗಳು:
2018 ಮಾರ್ಚ್ ಅಂತ್ಯದ ವೇಳೆಗೆ ಬೆಂಗಳೂರು-74.1ಲಕ್ಷ,ಬೆಳಗಾವಿ-11.6 ಲಕ್ಷ, ಮಂಗಳೂರು-11.2 ಲಕ್ಷ, ಮೈಸೂರು-10.4 ಲಕ್ಷ, ತುಮಕೂರು- 6.8 ಲಕ್ಷ ವಾಹನಗಳು ನೋಂದಾಣಿಯಾಗಿವೆ.

ವರ್ಷವಾರು ನೋಂದಣಿ ಸಂಖ್ಯೆ:
ಜನಗಣತಿಯ ಪ್ರಕಾರ 2011ರಲ್ಲಿ ಕರ್ನಾಟಕ ರಾಜ್ಯದ ಜನಸಂಖ್ಯೆ 6.1 ಕೋಟಿಯಷ್ಟಿದ್ದು, ಈಗ ವಾಹನಗಳ ಸಂಖ್ಯೆ 2 ಕೋಟಿಯಷ್ಟಿದೆ, 2008-09ರಲ್ಲಿ ವಾಹನಗಳ ಸಂಖ್ಯೆ 82.9ರಷ್ಟಿದ್ದರೆ, 2011-12ರಲ್ಲಿ 1 ಕೋಟಿಗೆ ಮುಟ್ಟಿದೆ. 2015-16ರ ಸಾಲಿಗೆ 1.6 ಕೋಟಿಯಷ್ಟಿದ್ದ ವಾಹನಗಳು ವಿವಿಧ ಆರ್‍ಟಿಒ ಕಚೇರಿಗಳಲ್ಲಿ ನೋಂದಾಣಿಯಾಗಿದ್ದರೆ, ಈಗ 2 ಕೋಟಿ ಗೆರೆಯನ್ನು ಮೀರಿ ನಿಂತಿದೆ.

ಅಪಘಾತದ ಆತಂಕ:
ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಪಘಾತಗಳು ಹೆಚ್ಚಾಗುತ್ತವೆ, ಅಲ್ಲದೆ ಪರಿಸರದ ಮಾಲಿನ್ಯ ಹಾಳಾಗುತ್ತದೆ ಎಂಬ ಭೀತಿಯನ್ನು ವ್ಯಕ್ತಪಡಿಸಿರುವ ಸಾರಿಗೆ ವಿಶ್ಲೇಷಕ ಎಂ.ಎನ್.ಶ್ರೀಧರ್ ಅವರು ಇದನ್ನು ತಪ್ಪಿಸಲು ಸರ್ಕಾರಗಳು ಜನರಲ್ಲಿ ಸಮೂಹ ಸಾರಿಗೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ