(ಐಆರ್‍ಸಿಟಿಸಿ) ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಅವರಿಗೆ ಜಾಮೀನು

ನವದೆಹಲಿ (ಪಿಟಿಐ), ಆ.31-ಭಾರತೀಯ ರೈಲ್ವೆ ಉಪಚಾರ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣದಲ್ಲಿ ಆರ್‍ಜೆಡಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಇಂದು ಜಾಮೀನು ಮಂಜೂರು ಮಾಡಿದೆ.
ಇದೇ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಹಾಜರಾತಿ ವಾರೆಂಟ್‍ನನ್ನು ಸಹ ವಿಶೇಷ ನ್ಯಾಯಾಧೀಶ ಅರುಣ್ ಭರದ್ವಾಜ್ ಜಾರಿಗೊಳಿಸಿದರು.
ಮಾಜಿ ಮುಖ್ಯಮಂತ್ರಿ ರಾಬ್ದಿ ದೇವಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ತಲಾ ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ.
ಐಆರ್‍ಸಿಟಿಸಿಯ ಎರಡು ಹೋಟೆಲ್‍ಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡುವಲ್ಲಿ ಭಾರೀ ಅಕ್ರಮ ಅವ್ಯವಹಾರಗಳು ನಡೆದಿವೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಲಾಲು ಕುಟುಂಬ ಹಾಗೂ ಇತರರು ಕೋರ್ಟ್ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ಮೇವು ಹಗರಣ ಪ್ರಕರಣದಲ್ಲಿ ಲಾಲು ಜಾರ್ಖಂಡ್ ಜೈಲಿನಲ್ಲಿರುವುದರಿಂದ ಅವರು ಇಂದು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ.
ತಾತ್ಕಾಲಿಕ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಆರ್‍ಜೆಡಿ ಅಧ್ಯಕ್ಷ ಹಾಗೂ ಬಹುಕೋಟಿ ರೂ.ಗಳ ಮೇವು ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲು ನಿನ್ನೆ ಜಾರ್ಖಂಡ್ ರಾಜಧಾನಿ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಶರಣಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ