ಏಷ್ಯಾಕಪ್ ಕ್ರಿಕೆಟ್ ಸರಣಿಗಾಗಿ ನಾಳೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ

ಮುಂಬೈ,ಆ.31- ಏಷ್ಯಾಕಪ್ ಕ್ರಿಕೆಟ್ ಸರಣಿಗಾಗಿ ನಾಳೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ನಾಯಕ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದ ಆಟಗಾರರತ್ತ ನಜರು ನೆಟ್ಟಿದ್ದಾರೆ.
ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್‍ಶರ್ಮಾ ಹಾಗೂ ಶಿಖರ್‍ಧವನ್‍ರೊಂದಿಗೆ ಕನ್ನಡಿಗ ಕೆ.ಎಲ್.ರಾಹುಲ್ ಕೆಲವು ಪಂದ್ಯಗಳಲ್ಲಿ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿದರೆ, ಮನೀಷ್ ಪಾಂಡೆ ಹಾಗೂ ಮಯಾಂಕ್ ಅಗರ್‍ವಾಲ್‍ರಿಗೆ 15ರ ಬಳಗದಲ್ಲಿ ಸ್ಥಾನ ಲಭಿಸುವುದು ಬಹುತೇಕ ಖಚಿತವಾಗಿದೆ.
ಇತ್ತೀಚೆಗೆ ನಡೆದ ಸರಣಿಯಲ್ಲಿ ಇಂಡಿಯಾ ಬಿ ತಂಡದ ಸಾರಥ್ಯವನ್ನು ಸಮರ್ಥವಾಗಿ ನಿಭಾಯಿಸಿರುವ ಮನೀಷ್ ಪಾಂಡೆ ಕಪ್ ಜಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದೇ ಅಲ್ಲದೆ, ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದು 306 ರನ್‍ಗಳನ್ನು ಗಳಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಮಯಾಂಕ್‍ಗೆ ಅದೃಷ್ಟ:
ರಣಜಿ, ದುಲೀಪ್ ಮತ್ತಿತರ ಸ್ಥಳೀಯ ಪ್ರತಿಷ್ಠಿತ ಸರಣಿಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆ ಆಗಲು ಮಯಾಂಕ್ ಅಗರ್‍ವಾಲ್ ಕಾತರದಿಂದಿದ್ದಾರೆ, ಏಷ್ಯಾ ಕಪ್ ಸರಣಿಯಲ್ಲಿ ರೋಹಿತ್ ಅಥವಾ ಶಿಖರ್ ಧವನ್‍ರಿಗೆ ರೆಸ್ಟ್ ನೀಡಿದರೆ ಮಯಾಂಕ್ ಅಗರ್‍ವಾಲ್‍ಗೆ ಅದೃಷ್ಟ ಒಲಿದು ಬರಲಿದೆ.
ಮುಂಬರುವ ವಿಶ್ವಕಪ್‍ಗೆ ಪೂರ್ವ ತಯಾರಿ ನಡೆಸುವ ಸಲುವಾಗಿ ಮುಂದಿನ ವೆಸ್ಟ್‍ಇಂಡೀಸ್ ಹಾಗೂ ಆಸ್ಟ್ರೇಲಿಯಾ ಸರಣಿಗಳಲ್ಲಿ ಬಹುತೇಕ ಹಿರಿಯ ಆಟಗಾರರಿಗೆ ರೆಸ್ಟ್ ಕೊಡಲು ಚಿಂತನೆ ನಡೆಸಿರುವುದರಿಂದ ತವರಿನಲ್ಲಿ ನಡೆಯಲಿರುವ ವೆಸ್ಟ್‍ಇಂಡೀಸ್ ಸರಣಿಯಲ್ಲಾದರೂ ಮಯಾಂಕ್‍ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವ ಸಂಭವವೇ ಹೆಚ್ಚಾಗಿದೆ.
ಏಷ್ಯಾಕಪ್‍ನ ಆಯ್ಕೆಯ ತಂಡದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಅಂಬಟಿರಾಯುಡು ಹಾಗೂ ಕೇದರ್‍ಜಾಧವ್‍ರನ್ನು ಪರಿಗಣಿಸುವ ಸೂಚನೆಗಳಿವೆ.
ಭುವಿ ಸಾರಥ್ಯ:
ಬೌಲಿಂಗ್ ವಿಭಾಗವನ್ನು ವೇಗಿ ಭುವನೇಶ್ವರ್‍ಕುಮಾರ್ ಮುನ್ನಡೆಸಿದರೆ, ಇಂಗ್ಲೆಂಡ್ ಪಿಚ್‍ನಲ್ಲಿ ಬಲಿಷ್ಠ ಬೌಲಿಂಗ್ ಪ್ರದರ್ಶಿಸುತ್ತಿರುವ ಜಸ್‍ಪ್ರೀತ್‍ಬೂಮ್ರಾ, ಶಾರ್ದೂಲ್‍ಠಾಕೂರ್, ಸಿದ್ಧಾರ್ಥ್ ಕೌಲ್, ಉಮೇಶ್‍ಯಾದವ್‍ರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ