ಬೆಂಗಳೂರು, ಆ.27- ನಗರದಲ್ಲಿ ಸಂಭವಿಸಬಹುದಾದ ಮಳೆ ಅನಾಹುತ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೇಯರ್ ಸಂಪತ್‍ರಾಜ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೆ ಕೊಡಗಿನಲ್ಲಿ ಮಳೆಯ ರೌದ್ರನರ್ತನಕ್ಕೆ ಭಾರೀ ಅನಾಹುತ ಸಂಭವಿಸಿದೆ. ಬೆಂಗಳೂರಿನಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಹಾಗಾಗಿ ಸಂಭವಿಸಬಹುದಾದ ಮಳೆ ಅನಾಹುತ ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ಎಲ್ಲಾ ವಾರ್ಡ್‍ನ ಸದಸ್ಯರು ತಮ್ಮ ತಮ್ಮ ಪ್ರದೇಶಗಳಲ್ಲಿ ಮಳೆಯಿಂದ ಸಂಭವಿಸಬಹುದಾದ ತೊಂದರೆಗಳ ಬಗ್ಗೆ ಪತ್ರ ನೀಡಿ ಅದನ್ನು ಆಯಾ ವಿಭಾಗದ ಚೀಪ್ ಇಂಜನಿಯರ್‍ಗಳು ಮಳೆ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಶಾಂತಕುಮಾರಿ ಗರಂ:
ನಮಗೆ ಅಧಿಕಾರಿಗಳು ಕೆಲಸ ಮಾಡಲು ಬಿಡುತ್ತಿಲ್ಲ ಪಿಇಒಡಬ್ಲ್ಯೂ ಕಾಮಗಾರಿಗಳಿಗೆ ಮೊದಲು ಅವಕಾಶ ಮಾಡಿಕೊಡಿ. ನಮ್ಮ ವಾರ್ಡ್ ಇಳಿಜಾರಿನಲ್ಲಿದೆ. ಸಣ್ಣ ಮಳೆ ಬಂದರೂ ಭಾರೀ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಪಿಇಒಡಬ್ಲ್ಯೂಗೆ ಅನುಮತಿ ನೀಡಿ ಎಂದು ಮೇಯರ್ ವಿರುದ್ಧ ಮಾಜಿ ಮೇಯರ್ ಶಾಂತಕುಮಾರಿ ಗರಂ ಆದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಮುಂದಿನ ವಾರದಲ್ಲಿ ಗಾಜಿನಮನೆಯಲ್ಲಿ ಪಿಇಒಡಬ್ಲ್ಯೂ ಕಾಮಗಾರಿ ಅನುಷ್ಠಾನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಿಂಗಲ್ ವಿಂಡೋ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಏಕಕಾಲದಲ್ಲಿ, ಎಲ್ಲಾ ವಾರ್ಡ್‍ಗಳ ಕಾಮಗಾರಿಗಳಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಗೋಪಾಲಯ್ಯ ಮಾತನಾಡಿ, ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಡುಬಡವರಿದ್ದಾರೆ. ಅವರಿಗಿನ್ನೂ ಹಕ್ಕು ಪತ್ರ ದೊರೆತಿಲ್ಲ. ಅವರಿಗೆ ಕೂಡಲೇ ಹಕ್ಕು ಪತ್ರ ನೀಡಿ ಎಂದರು.