ಪಾಕ್‌ಗೆ ಸಾಲ ಕೊಡಲು ಚೀನಾ ಬ್ಯಾಂಕ್‌ಗಳಿಗೆ ಭಯವಂತೆ!

ಹಾಂಕಾಂಗ್‌: ಚೀನಾದ ಬ್ಯಾಂಕ್‌ಗಳಿಗೆ ಪಾಕಿಸ್ತಾನಕ್ಕೆ ಸಾಲ ಕೊಡಲು ಭಯವಾಗುತ್ತಿದೆಯಂತೆ. ಇದಕ್ಕೆ ಕಾರಣವೇನು ಗೊತ್ತೇ?

ದಿವಾಳಿಯಾಗುವ ಹಂತಕ್ಕೆ ತಲುಪಿರುವ ಪಾಕಿಸ್ತಾನಕ್ಕೆ ಐಎಂಎಫ್‌ ನೆರವು ಕೊಡುವುದನ್ನು ಅಮೆರಿಕ ಬಲವಾಗಿ ವಿರೋಧಿಸುತ್ತಿದೆ. ಮತ್ತೊಂದು ಕಡೆ ಪಾಕ್‌ ಕರೆನ್ಸಿಯ ಮೌಲ್ಯ ಕುಸಿಯುತ್ತಿದೆ. ಹೀಗಾಗಿ ಪಾಕ್‌ಗೆ ಸಾಲ ಕೊಡಲು ಚೀನಿ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಸಲುವಾಗಿ ಚೀನಾದ ಬ್ಯಾಂಕ್‌ಗಳು ಈಗಾಗಲೇ ಹತ್ತಾರು ಶತಕೋಟಿ ಡಾಲರ್‌ ಸಾಲವನ್ನು ಕೊಟ್ಟಿವೆ. ಒಟ್ಟು 57 ಶತಕೋಟಿ ಡಾಲರ್‌ ವೆಚ್ಚದ ಯೋಜನೆ ಇದಾಗಿದೆ. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಹಾಗೂ ಸೌದಿ ಅರೇಬಿಯಾದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ. ಕೇವಲ 2 ತಿಂಗಳಿನ ಆಮದಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಪಾಕಿಸ್ತಾನ ಹೊಂದಿದೆ.

ಐಎಂಎಫ್‌ ಒಂದು ವೇಳೆ ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ಕೊಡಲು ಒಪ್ಪಿದರೆ, ಹಲವಾರು ಷರತ್ತುಗಳನ್ನು ವಿಧಿಸಲಿದೆ. ಆದರೆ ಐಎಂಎಫ್‌ ನೆರವು ನೀಡಿದರೆ, ಪಾಕಿಸ್ತಾನ ಅದನ್ನು ಚೀನಾದ ಸಾಲ ಮರುಪಾವತಿಗೆ ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕ ಆರೋಪಿಸಿದ್ದು, ಇದನ್ನು ಬಲವಾಗಿ ವಿರೋಧಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ