ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಮತ್ತಷ್ಟು ಗಂಭೀರ; ಪ್ರಧಾನಿ ಮೋದಿ ಭೇಟಿ

ನವದೆಹಲಿ:ಆ-16: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ (93) ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ರಾಜಕೀಯ ಮುಖಂಡರು ಇಲ್ಲಿನ ಏಮ್ಸ್‌ಗೆ ಭೇಟಿ ನೀಡುತ್ತಿದ್ದಾರೆ.

ಕಳೆದ 24 ಗಂಟೆಗಳಿಂದ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ಏಮ್ಸ್‌ ವೈದ್ಯರು ತಿಳಿಸಿದ್ದು, ಈಗಾಗಲೇ ಗೃಹ ಸಚಿವ ರಾಜನಾಥ ಸಿಂಗ್‌, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಸೇರಿ ಅನೇಕ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಆಸ್ಪತ್ರೆಗೆ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದ್ದು, ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವಾರಾಜ್‌ ಇದೀಗ ಏಮ್ಸ್‌ಗೆ ಬಂದಿದ್ದಾರೆ. ಬೆಳಿಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಚಿವೆ ಸ್ಮೃತಿ ಇರಾನಿ ಹಾಗೂ ಜೆ.ಪಿ.ನಡ್ಡಾ ಭೇಟಿ ನೀಡಿದ್ದರು.

ಇನ್ನು ವಾಜಪೇಯಿ ಅನಾರೋಗ್ಯ ಹಿನ್ನಲೆಯಲ್ಲಿ ದೆಹಲಿಗೆ ಬರುವಂತೆ ಬಿಜೆಪಿ ಸಿಎಂಗಳಿಗೆ ಬುಲಾವ್ ನೀಡಲಾಗಿದ್ದು, ಇಂದಿನ ಎಲ್ಲ ಕಾರ್ಯಕ್ರಮಗಳನ್ನು ಬಿಜೆಪಿ ರದ್ದುಗೊಳಿಸಿದೆ.

ಗ್ವಾಲಿಯರ್‌ನಲ್ಲಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ದೇಶದ ವಿವಿಧ ಭಾಗಗಳಲ್ಲಿ ವಾಜಪೇಯಿ ಅವರ ಆರೋಗ್ಯ ಸುಧಾರಿಸುವಂತೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಒಂದೇ ಒಂದು ಬಾರಿ ಅವರು ಎದ್ದು ಭಾಷಣ ಮಾಡಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಅವರನ್ನು ನಮ್ಮ ಜೀವನದಲ್ಲಿ ಎಂದಿಗೂ ಮರೆಯದಂತೆ ಕಣ್ತುಂಬಿಕೊಳ್ಳುತ್ತೇವೆ ಎಂದು ವಾಜಪೇಯಿ ಅವರ ಸಂಬಂಧಿ ಕಾಂತಿ ಮಿಶ್ರಾ ದುಃಖತಪ್ತರಾಗಿ ಹೇಳಿದ್ದಾರೆ.

ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರುವ ವಾಜಪೇಯಿ ಅವರನ್ನು ಕಾಣಲು ದೇಶದ ಎಲ್ಲ ಭಾಗಗಳಿಂದ ರಾಜಕೀಯ ನಾಯಕರು, ಅಭಿಮಾನಿಗಳು ಆಸ್ಪತ್ರೆಯತ್ತ ಬರುತ್ತಿದ್ದಾರೆ.

Atal Bihari Vajpayee,health,critical,PM Narendra Modi visits

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ