ರಫೇಲ್ ಖರೀದಿ ಹಗರಣ: ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ :ಆ-14: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌, ಇದೀಗ ಈ ವಿಷಯದಲ್ಲಿ ಮೋದಿ ಸರಕಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಟೀಸರ್‌ ವಿಡಿಯೋ ಬಿಡುಗಡೆ ಮಾಡಿದೆ.

ಈ ಟೀಸರ್‌ ನಲ್ಲಿ ಕಾಂಗ್ರೆಸ್‌ ಪಕ್ಷ ತಾನು ಸದ್ಯದಲ್ಲೇ “ಮೋದಿ ಸರಕಾರದ ಈ ಅವ್ಯವಹಾರದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದಾಗಿ’ ಹೇಳಿಕೊಂಡಿದೆ.

ಟ್ವಿಟರ್‌ನಲ್ಲಿ ಈ ಟೀಸರ್‌ ವಿಡಿಯೋ ಹಾಕಿರುವ ಕಾಂಗ್ರೆಸ್‌, ತನ್ನ ಫಾಲೋವರ್‌ಗಳಿಗೆ “ನೋಡುತ್ತಾ ಇರಿ, ಈ ವಿಷಯದಲ್ಲಿ ಇನ್ನಷ್ಟು ವಿಷಯಗಳು ಹೊರ ಬರಲಿವೆ’ ಎಂದು ಹೇಳಿದೆ.

ತನ್ನ ನೇತೃತ್ವದ ಯುಪಿಎ ಸರಕಾರ ನಿಗದಿಸಿದ್ದ ದರಕ್ಕಿಂತಲೂ ಹೆಚ್ಚು ಬೆಲೆ ತೆತ್ತು ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅದೇ ರಫೇಲ್‌ ಫೈಟರ್‌ ಜೆಟ್‌ಗಳನ್ನು ಖರೀದಿಸುವ ಮೂಲಕ ಭ್ರಷ್ಟಾಚಾರ ಎಸಗಿದೆ ಎಂಬುದು ಕಾಂಗ್ರೆಸ್‌ ಆರೋಪವಾಗಿದೆ.

ಫ್ರಾನ್ಸ್‌ ಜತೆಗೆ ದುಬಾರಿ ರಫೇಲ್‌ ಫೈಟರ್‌ ಜೆಟ್‌ ಖರೀದಿ ವ್ಯವಹಾರ ಕುದುರಿಸಿರುವ ಪ್ರಧಾನಿ ಮೋದಿ ಸರಕಾರ ಆ ಮೂಲಕ ಸ್ವಜನ ಪಕ್ಷಪಾತದ ಬಂಡವಾಳಶಾಹಿತ್ವವನ್ನು, ಸ್ವಹಿತಾಸಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಲಿಕೊಡುತ್ತಿದೆ ಎಂದು ಆರೋಪಿಸಿದೆ.

Rafale Deal,Congress,teaser,Rahul Gandhi,PM Narendra Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ