ನಾವು ಬಾಂಗ್ಲಾ ವಿರೋಧಿಗಳಲ್ಲ; ಮಮತಾ ಬ್ಯಾನರ್ಜಿಯವರ ಕಡು ವಿರೋಧಿಗಳು: ಅಮಿತ್ ಶಾ

ಕೋಲ್ಕತ್ತಾ:ಆ-11: ಬಿಜೆಪಿ ಪಶ್ಚಿಮ ಬಂಗಾಳದ ಪ್ರತಿ ಜಿಲ್ಲೆಯಲ್ಲಿಯೂ ಸಮಾವೇಶಗಳನ್ನು ನಡಿಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕಾರವನ್ನು ಕಿತ್ತೊಗೆಯಲಿದ್ದೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಭಾರತೀಯ ಜನತಾ ಯುವ ಮೋರ್ಚಾ ಕೊಲ್ಕತ್ತದ ಮಾಯೋ ರಸ್ತೆಯಲ್ಲಿ ಆಯೋಜಿಸಿದ್ದ ‘ಯುವ ಸ್ವಾಭಿಮಾನ ಸಮಾವೇಶ’ದಲ್ಲಿ ಮಾತನಾಡಿದ ಶಾ, ನಾವು ಬಾಂಗ್ಲಾ ವಿರೋಧಿಯಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಡು ವಿರೋಧಿಗಳು. ಹಾಗಾಗಿ ಬಿಜೆಪಿ ಪಶ್ಚಿಮ ಬಂಗಾಳದ ಪ್ರತಿಯೊಂದು ಜಿಲ್ಲೆಯಲ್ಲೂ ಸಮಾವೇಶ ಹಮ್ಮಿಕೊಂಡು ಮಮತಾ ಅವರ ಆಡಳಿತವನ್ನು ಬೇರು ಸಹಿತ ಕಿತ್ತೊಗೆಯಲಿದೆ ಎಂದು ವಾಗ್ದಾಳಿ ನಡೆಸಿದರು.

ಬಂಗಾಳಿ ವಿರೋಧಿ ಎಂದು ಶಾ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ ಕಾಂಗ್ರೆಸಿಗರನ್ನು ಉದ್ದೇಶಿಸಿ, ಮಾತನಾಡಿದ ಅವರು, ಬಿಜೆಪಿ ಪಕ್ಷದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟೂರು ಬಂಗಾಳ. ಹೀಗಿರುವಾಗ ನಾನು ಬಂಗಾಳಿ ವಿರೋಧಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ನಮ್ಮ ರ‍್ಯಾಲಿಯನ್ನು ಜನರು ನೋಡದಂತೆ ಮಾಡಲು ಎಲ್ಲ ಬೆಂಗಾಲಿ ಚಾನೆಲ್‌ಗಳ ಸಿಗ್ನಲ್‌ಗಳನ್ನು ದುರ್ಬಲಗೊಳಿಸಲಾಗಿದೆ. ಈ ಮೂಲಕ ನಮ್ಮ ದನಿಯನ್ನು ಅಡಗಿಸಲು ಯತ್ನಿಸಲಾಗುತ್ತಿದೆ. ಆದರೆ ಪ್ರತಿ ಜಿಲ್ಲೆಗೂ ತೆರಳಿ ಟಿಎಂಸಿಯನ್ನು ಕಿತ್ತು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯನ್ನು ಬಿಜೆಪಿ ಶಾಂತಿಯುತವಾಗಿ ತೆಗೆದುಕೊಂಡು ಹೋಗುವ ಬಗ್ಗೆ ಭರವಸೆ ನೀಡುತ್ತದೆ. ನಮ್ಮ ಈ ನಡೆಯನ್ನು ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಮತಗಳಿಗಿಂತ ನಮಗೆ ದೇಶ ಮುಖ್ಯ. ಯಾವುದೇ ಪಕ್ಷದಿಂದ ವಿರೋಧ ಎದುರಾದರೂ ಎನ್‌ಆರ್‌ಸಿ ಬಗ್ಗೆ ಪ್ರಕ್ರಿಯೆಯನ್ನು ನಿಲ್ಲಿಸುವುದಿಲ್ಲ. ಎನ್ಆರ್ ಸಿ ಮೂಲಕ ಎಲ್ಲಾ ಅಕ್ರಮ ವಲೆಸಿಗರನ್ನು ದೇಶದಿಂದ ಹೊರ ಹಾಕಲಾಗುವುದು ಎಂದರು.

ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಮಮತಾ ಅವರು ಯಾಕೆ ಪೋಷಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ ಅಮಿತ್ ಶಾ, ಈ ಬಗ್ಗೆ ರಾಹುಲ್ ಗಾಂಧಿ ಅವರು ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಯಾಕೆಂದರೆ ಕಾಂಗ್ರೆಸ್ ಕೂಡ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯೋಚಿಸಿದೆ ಎಂದು ದೂರಿದರು.

“We Are Here To Uproot Mamata Banerjee”,Amit Shah,Kolkata

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ