ಸಹಕಾರಿ ಬ್ಯಾಂಕ್ ಗಳ ರೈತರ ಸಾಲಮನ್ನಾಗೆ ಸಚಿವ ಸಂಪುಟ ಅಸ್ತು

ಬೆಂಗಳೂರು: 2018ರ ಜುಲೈ 10ರ ವರೆಗೆ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಮನ್ನಾ ಮಾಡಲು ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು,  ಸದ್ಯದಲ್ಲೇ ಸಹಕಾರ ಸಂಘಗಗಳಲ್ಲಿನ ರೈತರ 13,441 ಕೋಟಿ ರುಪಾಯಿ ಮನ್ನಾ ಆಗಲಿದೆ ಎಂದು ತಿಳಿಸಿದರು.

ಈ ಮೊದಲು ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಒಂದು ಕುಟುಂಬ ಎಂದು ಉಲ್ಲೇಖಿಸಲಾಗಿತ್ತು. ಈಗ ಆ ನಿಯಮಾವಳಿ ಕೈ ಬಿಡಲಾಗಿದ್ದು, ಕುಟುಂಬದ ಎಷ್ಟೇ ರೈತರು ಸಾಲ ಮಾಡಿದ್ದರೂ ಅದನ್ನು ಮನ್ನಾ ಮಾಡುತ್ತೇವೆ ಎಂದು ಸಿಎಂ ಹೇಳಿದರು.

ಇನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲಮನ್ನಾವನ್ನು ನಾಲ್ಕು ಕಂತುಗಳಲ್ಲಿ ಮರುಪಾವತಿ ಮಾಡಲು ಉದ್ದೇಶಿಸಿದ್ದು, ಈ ಕುರಿತು ಮುಂದಿನ ವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದರು.

ಮುಂದಿನ ಒಂದು ವರ್ಷದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲದ ಹಣವನ್ನು ಮರುಪಾವತಿ ಮಾಡುತ್ತೇವೆ ಎಂದು ಭರವಸೆ ನೀಡಿದ ಕುಮಾರಸ್ವಾಮಿ, ಚಾಲ್ತಿ ಸಾಲದ ಮನ್ನಾ ಪ್ರಕ್ರಿಯೆ ಈಗಿನಿಂದಲೇ ಜಾರಿಗೆ ಬಂದಿದೆ. ಯಾರಿಂದಾದರೂ ಒತ್ತಾಯಪೂರ್ವಕವಾಗಿ ಮರುಪಾವತಿ ಮಾಡಿಸಲ್ಪಟ್ಟಿದ್ದವರಿಗೂ ಚಾಲ್ತಿ ಸಾಲಮನ್ನಾ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ರೈತರಿಗೆ ಅನುಕೂಲ ಮಾಡುವ ಮತ್ತೊಂದು ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಸ್ವಾತಂತ್ರ್ಯೋತ್ಸವ ಅಥವಾ ಗಣೇಶನ ಹಬ್ಬದ ಕೊಡುಗೆಯಾಗಿ ನೀಡುತ್ತೇನೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗದಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.

ಇದೇ ವೇಳೆ, ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಯೋಜನೆಗಳಿಗೆ ಕಡಿವಾಣ ಹಾಕಿದ್ದೇನೆ ಎಂಬುದು ಸುಳ್ಳು. ಶಾದಿಭಾಗ್ಯ, ಮಾತೃಪೂರ್ಣ ಸೇರಿದಂತೆ ಎಲ್ಲ ಯೋಜನೆಗಳನ್ನು ಮುಂದುವರಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ