ಇಳಿಯಲಿದೆ ಇನ್ನಷ್ಟು ಸರಕುಗಳ ಮೇಲಿನ ಜಿಎಸ್‍ಟಿ ಹೊರೆ

ಹೊಸದಿಲ್ಲಿ: ಹೆಚ್ಚಿನ ತೆರಿಗೆ ಹೊರೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕೌನ್ಸಿಲ್ ತೆರಿಗೆ ಭಾರವನ್ನು ಸ್ವಲ್ಪಮಟ್ಟಿಗೆ ಇಳಿಸಿ ಉಪಶಮನ ನೀಡಿದ್ದು ಗೊತ್ತೇ ಇದೆ. ಈಗಾಗಲೆ ಹಲವಾರು ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸಿರುವ ಜಿಎಸ್‍ಟಿಕೌನ್ಸಿಲ್, ಇನ್ನಷ್ಟು ಸಕರುಗಳ ಮೇಲಿನ ತೆರಿಗೆ ದರ ಕಡಿಮೆ ಮಾಡಲಿದೆಯಂತೆ.

ಒಂದು ವೇಳೆ ಆದಾಯ ಹೆಚ್ಚಾದರೆ ಇನ್ನಷ್ಟು ಉತ್ಪನ್ನಗಳ ಮೇಲಿನ ಜಿಎಸ್‍ಟಿ ದರವನ್ನು ಕಡಿತ ಮಾಡಲಾಗುತ್ತದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಜಿಎಸ್‍ಟಿ ಕಾನೂನುಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಗೋಯಲ್ ಈ ವಿಷಯವನ್ನು ತಿಳಿಸಿದರು.

‘ಈ ಹಿಂದಿನ ಸಮಾವೇಶಗಳಲ್ಲಿ ಬಹಳಷ್ಟು ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಭಾರವನ್ನು ಜಿಎಸ್‍ಟಿ ಕೌನ್ಸಿಲ್ ಇಳಿಸಿದೆ. ಈ ಪರೋಕ್ಷ ತೆರಿಗೆ ವಿಧಾನದ ಮೂಲಕ ಗ್ರಾಹಕರ ಮೇಲಿನ ತೆರಿಗೆ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಬೇಕೆಂದಿದ್ದೇವೆ. ಕಳೆದ ವರ್ಷ ಜಿಎಸ್‍ಟಿ ಕೌನ್ಸಿಲ್ 384 ಸರಕುಗಳು, 68 ಸೇವೆಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಿತ್ತು. ಹಾಗೆಯೇ 186 ಸರಕುಗಳು, 99 ಸೇವೆಗಳನ್ನು ಜಿಎಸ್‍ಟಿಯಿಂದ ವಿನಾಯಿತಿ ನೀಡಲಾಗಿದೆ’ ಎಂದಿದ್ದಾರೆ.

ಸ್ಯಾನಿಟರಿ ಪ್ಯಾಡ್ಸ್ ಸಹ ವಿನಾಯಿತಿ ಪಡೆದ ಸರಕುಗಳಲ್ಲಿ ಇವೆ ಎಂದು ಗೋಯಲ್ ತಿಳಿಸಿದರು. ದೇಶದ ಆರ್ಥಿಕ ಕೊರತೆಗೆ ಅನುಗುಣವಾಗಿ ಜಿಎಸ್‍ಟಿ ಸಂಗ್ರಹಿಸಲಾಗುತ್ತಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಭಾರತದ ಅಭಿವೃದ್ಧಿ ಉತ್ತಮವಾಗಿದೆ. ಐಎಂಎಫ್ ಬಿಡುಗಡೆ ಮಾಡಿರುವ ವರದಿಯಲ್ಲೂ 2019-20ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಮಾಣ ಶೇ.7.5ರಷ್ಟು ಇರಲಿದೆ ಎಂದು ಅಂದಾಜಿಸಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ