ಮುಂಬೈ: ಆ-10; ರೈಲ್ವೆ ನಿಲ್ದಾಣದಲ್ಲಿ ಕಿಕಿ ಡ್ಯಾನ್ಸ್ ಚಾಲೆಂಜ್ ಶೂಟಿಂಗ್ ಮಾಡಿದ ಹಿನ್ನೆಲೆಯಲ್ಲಿ ಮೂವರು ಯುವಕರಿಗೆ ಮೂರು ದಿನಗಳ ಕಾಲ ರೈಲು ನಿಲ್ದಾಣ ಸ್ವಚ್ಛ ಮಾಡುವ ಶಿಕ್ಷೆ ನೀಡಲಾಗಿದೆ.
ಈ ಕುರಿತಂತೆ ಆದೇಶ ನೀಡಿರುವ ವಸಾಯಿ ರೈಲ್ವೆ ನ್ಯಾಯಾಲಯ, ಸತತವಾಗಿ ಮೂರು ದಿನಗಳ ಕಾಲ ವಸಾಯಿ ರೈಲ್ವೆ ನಿಲ್ದಾಣವನ್ನು ಸ್ವಚ್ಛ ಮಾಡಬೇಕು ಎಂದು ಸೂಚನೆ ನೀಡಿದೆ.
ಶ್ಯಾಮ್ ಶರ್ಮಾ(24), ಧ್ರುವ(23) ಹಾಗೂ ನಿಶಾಂತ್(20) ಎಂಬ ಮೂವರು ಯುವಕರು ವೆಸ್ಟರ್ನ್ ರೈಲ್ವೆಯ ವಸಾಯಿ ರೈಲು ನಿಲ್ದಾಣದಲ್ಲಿ ಕಿಕಿ ಡ್ಯಾನ್ಸ್ ಶೂಟ್ ಮಾಡಿದ್ದರು. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಟ್ ಮಾಡಲಾಗಿದ್ದು, ಇದು ಬಹಳಷ್ಟು ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಮೂವರು ಯುವಕರನ್ನು ಬಂಧಿಸಿದ ರೈಲ್ವೆ ಭದ್ರತಾ ಪಡೆಯ ಅಧಿಕಾರಿಗಳು ರೈಲ್ವೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರು ತಪ್ಪು ಮಾಡಿದ್ದಾರೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರೈಲ್ವೆ ನಿಲ್ದಾಣವನ್ನು ಸ್ವಚ್ಛಗೊಳಿಸಬೇಕು. ಮಾತ್ರವಲ್ಲ, ಅಪಾಯಕಾರಿಯಾಗಿರುವ ಕಿಕಿ ಡ್ಯಾನ್‌ಸ್ ಚಾಲೆಂಜನ್ನು ಸ್ವೀಕರಿಸಬಾರದು ಎಂದು ಪ್ರಯಾಣಿಕರಿಗೆ ತಿಳಿ ಹೇಳಬೇಕು ಎಂಬ ಶಿಕ್ಷೆಯನ್ನು ನೀಡಿದೆ.
ರೈಲ್ವೆ ನ್ಯಾಯಾಲಯದ ಆದೇಶದ ಪ್ರಕಾರ ಈ ಮೂವರು ಯುವಕರು ವಸಾಯಿ ನಿಲ್ದಾಣದ ಫ್ಲಾಟ್ ಫಾರಂಗಳನ್ನು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಸ್ವಚ್ಛತಾ ಕಾರ್ಯ ಮಾಡಬೇಕಿದೆ.
ಭಾರತೀಯ ರೈಲ್ವೆ ಕಾಯ್ದೆ(Indian Railway Act) ಯ ಸೆಕ್ಷನ್ 145ಬಿ(ಅಸಭ್ಯತೆ/ಉಪದ್ರವ), ಸೆಕ್ಷನ್ 147(ರೈಲ್ವೆ ಆವರಣದಲ್ಲಿ ಅಕ್ರಮ ಪ್ರವೇಶ/ರೈಲ್ವೆ ಆಸ್ತಿಯನ್ನು ಹಾನಿ ಮಾಡುವುದು), ಸೆಕ್ಷನ್ 154(ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವುದು) ಹಾಗೂ ಸೆಕ್ಷನ್ 156(ಸ್ಟಂಟ್ ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
KiKi Dance Challenge, Mumbai,Railway Protection Force, Vasai railway station