ರಾಜ್ಯದ ಅಭಿವೃದ್ಧಿ ಬಗ್ಗೆ ಸಮಿಶ್ರ ಸರ್ಕಾರದ ನಿರ್ಲಕ್ಷ್ಯ: ಬಿಎಸ್ ವೈ

ಯಾದಗಿರಿ: ಆ-10: ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರಗಾಲವಿದೆ. ಹೀಗಿದ್ದರೂ ಸಿಎಂ ಅಗಲಿ, ಕೃಷಿ ಸಚಿವರಾಗಲಿ ಯಾವುದೇ ಜಿಲ್ಲೆಗೆ ಭೇಟಿ ನೀಡಿಲ್ಲ. ರೈತರ ಸಾಲಮನ್ನಾ ಘೋಷಿಸಿರುವ ಸರ್ಕಾರ ರಾಜ್ಯದ ಅಭಿವೃದ್ದಿಯನ್ನು ಸ್ಥಗಿತಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ ರಾಜ್ಯ ಸಮ್ಮಿಶ್ರ ಸರ್ಕಾರದ ಒಂದು ದಂಧೆಯಾಗಿದೆ. ಇಂತಹ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡದೆ ಕಾಂಗ್ರೆಸ್ ಸಂಪೂರ್ಣ ವಾಗಿ ಮೌನವಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಸಮಿಶ್ರ ಸರ್ಕಾರದ ಸಚಿವರು ಒಂದು ಮಾತು ಅಡುತ್ತಿಲ್ಲ. ಪ್ರಧಾನಿ ಮೋದಿ ವಿಶ್ವವೇ ನೋಡುವಂತೆ ಅಭಿವೃದ್ಧಿ ಮಾಡುತ್ತಿದ್ದಾರೆ. ದೇಶದಲ್ಲಿ‌ ಕಾಂಗ್ರೆಸ್ ವಿರುದ್ಧ ಎಲ್ಲ ಪಕ್ಷಗಳು ತಿರುಗಿಬಿದ್ದಿವೆ. ಲೋಕಸಭೆ ಚುನಾವಣೆಯಲ್ಲಿ ನಾವು ಹಿಂದಿನಗಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

ಕಳೆದ ಮೂರು ತಿಂಗಳಿನಿಂದ ಸಾಲಮನ್ನಾದ ವಿಷಯ ಚರ್ಚೆಯಾಗಿದೆ. ಆದರೆ, ರೈತರಿಗೆ ಮಾತ್ರ ಸಾಲಮನ್ನಾದ ಲಾಭ ಸಿಕ್ಕಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ‌ ಸಂಪೂರ್ಣ ಸ್ಥಗಿತವಾಗಿದೆ ಎಂದು ಆರೋಪಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಬಿತ್ತನೆ ‌ಕಡಿಮೆಯಾಗಿದೆ. ಜಿಲ್ಲೆಯಲ್ಲಿ 2017-2018 ಸಾಲಿನಲ್ಲಿ 10 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುಮಠಕಲ್ ಮತಕ್ಷೇತ್ರದ ಕಡೇಚೂರ್ ಬಾಡಿಯಾಳದಲ್ಲಿ ಕೈಗಾರಿಕೆ ಆರಂಭಿಸಿಲ್ಲ. ವಡಗೇರಾ ತಾಲೂಕಿನ ಕೊನೇ ಭಾಗದ ರೈತರಿಗೆ‌ ಕಾಲುವೆ ಮುಖಾಂತರ ನೀರು ತಲುಪಿಸಲು ಆಗಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಇಂಜಿನಿಯರ್ ಕಾಲೇಜು, ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗಿಲ್ಲ ಎಂದು ಗುಡುಗಿದರು.

BJP,B S Yedyurappa,Yadagiri

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ