ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಸಹಾಯವಾಣಿ

ಬೆಂಗಳೂರು: ಆ-೭:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್‌ ವಿದ್ಯಾರ್ಥಿಗಳ ಯಾವುದೇ ದೂರುಗಳಿದ್ದರೂ ಸಮಾಜ ಕಲ್ಯಾಣ ಇಲಾಖೆ ನೂತನವಾಗಿ ತೆರೆದಿರುವ ಸಹಾಯವಾಣಿಗೆ ನೀಡುವ ಮೂಲಕ ಶೀಘ್ರವೇ ಸಮಸ್ಯೆ ಬಗೆಹರಿಸಿಕೊಳ್ಳಲು ವೇದಿಕೆ ಮಾಡಿಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ನೃಪತುಂಗಾ ರಸ್ತೆಯಲ್ಲಿರುವ ಯವನಿಕಾದಲ್ಲಿ ಸಮಾಜ ಕಲ್ಯಾಣ ಇಲಾಖೆ ತೆರೆದಿರುವ ನೂತನ ‘ಕಲ್ಯಾಣ ಕೇಂದ್ರ’ ಸಹಾಯವಾಣಿ‌ಗೆ ಚಾಲನೆ ನೀಡಿ‌ ಮಾತನಾಡಿದರು.

ಹಾಸ್ಟೆಲ್‌ನಲ್ಲಿರುವ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಒಟ್ಟು 2.5 ಸಾವಿರ ಹಾಸ್ಟೆಲ್‌ಗಳು ನಡೆಸುತ್ತಿವೆ.‌ ಈ ಹಾಸ್ಟೆಲ್‌‌ಗಳಲ್ಲಿ ಊಟದ ವ್ಯವಸ್ಥೆ, ಹಾಸಿಗೆ ದಿಂಬು, ವಸತಿ ಇತರೆ ಮೂಲಸೌಕರ್ಯದ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳು ಈ‌ ಸಹಾಯವಾಣಿಗೆ ಕರೆ ಅಥವಾ ವಾಟ್ಸ್‌ಅಪ್‌ ಮಾಡುವ‌ ಮೂಲಕ ಸಮಸ್ಯೆ ತೋಡಿಕೊಳ್ಳಬಹುದು. ಜೊತೆಗೆ ಸಲಹೆಗಳನ್ನೂ ನೀಡಬಹುದು‌ ಎಂದರು.

ಈ ದೂರಿಗೆ ಮೊದಲಿಗೆ ತಹಶಿಲ್ದಾರರು ಸ್ಪಂದಿಸಲಿದ್ದಾರೆ.‌ ಇಲ್ಲದಿದ್ದರೆ ಜಿಲ್ಲಾಧಿಕಾರಿ, ರಾಜ್ಯ‌ಮಟ್ಟದವರೆಗೂ ಹೋಗಲಿದೆ. ಇಲ್ಲಿಯೂ ಪರಿಹಾರ ಸಿಗದಿದ್ದರೆ ಸಚಿವರ ಮಟ್ಟಕ್ಕೆ ಹೋಗಲಿದ್ದು, ಒಟ್ಟಾರೆ ಹಾಸ್ಟೆಲ್‌ನ ಎಸ್‌ಸಿ ಎಸ್‌ಟಿ ಮಕ್ಕಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ದೇಶದಲ್ಲೇ ಮೊದಲ ಕೇಂದ್ರವಾಗಿದೆ ಎಂದರು.

ಹಿಂದಿನಿಂದಲೂ ಎಸ್‌ಸಿ ಎಸ್‌ಟಿಗಳ ಸಮಸ್ಯೆ ಬಗ್ಗೆ ದೂರುಗಳು ಇದ್ದವು. ಸದನದಲ್ಲೂ ಸಾಕಷ್ಟು ಚರ್ಚೆಯಾಗಿವೆ.‌ ಆಯವ್ಯಯದಲ್ಲಿ ಬಿಡುಗಡೆಯಾಗುವ ಅಷ್ಟೂ ಅನುದಾನವೂ ಈ‌ಮಕ್ಕಳಿಗೆ ತಲುಪಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ‌ ಮಾಡುವುದೇ ಇಲಾಖೆ ಹಾಗೂ ಸರಕಾರದ ಉದ್ದೇಶ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ‌ ಖರ್ಗೆ ಇದ್ದರು.

ಸಹಾಯವಾಣಿ ಸಂಖ್ಯೆ- 080- 22634300
ವಾಟ್ಸ್‌ಅಪ್ ಸಂಖ್ಯೆ- 9901100000

SC ST Students,Helpline,kalyana kendra,Deputy Chief Minister Dr.G.Parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ