ಮೇಕೆ ’ಮಾತೆ’ಯಂತೆ ಅದಕ್ಕೆ ಹಿಂದುಗಳು ಮಟನ್ ತಿನ್ನಬಾರ್ದಂತೆ…!

ಕೋಲ್ಕತ್ತಾ:ಜು-೩೧: ಮೇಕೆ ಮಾತೆ ಎಂದು ಬಿಜೆಪಿ ನೇತಾರರೊಬ್ಬರು ಹೇಳಿಕೆ ನೀಡಿದ್ದು, ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕು ಬಿಜೆಪಿ ನೇತಾರರ ವಾದವಾದರೂ ಏನು ಅಂತಿರಾ..? ಇಲ್ಲಿದೆ ವಿವರ… ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು ಮೇಕೆಯನ್ನು ‘ಮಾತೆ’ ಪಟ್ಟಿಗೆ ಸೇರಿಸಿ ಅಚ್ಚರಿಯುಂಟುಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಬೋಸ್, ಗಾಂಧೀಜಿಯವರು ಮೇಕೆ ಹಾಲು ಕುಡಿಯುತ್ತಿದ್ದುದರಿಂದ ಅದನ್ನು ಮಾತೆ ಎಂದು ಪರಿಗಣಿಸುತ್ತಿದ್ದರು. ಹಾಗಾಗಿ ಹಿಂದೂಗಳು ಮೇಕೆಯನ್ನು ಮಾತೆ ಎಂದು ಪರಿಗಣಿಸಿ ಮಟನ್ ಸೇವನೆ ನಿಲ್ಲಿಸಬೇಕು ಎಂದಿದ್ದಾರೆ.

ಚಂದ್ರ ಕುಮಾರ್ ಬೋಸ್ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಂಬಂಧಿ. ತಮ್ಮ ಹೇಳಿಕೆಗೆ ವಿವರ ನೀಡುವ ಬೋಸ್, ಗಾಂಧೀಜಿ ಅವರು ಕೊಲ್ಕತ್ತಾದ ವುಡ್‍ಬರ್ನ್ ಪಾರ್ಕ್ ನಲ್ಲಿರುವ ನನ್ನ ತಾತ ಸರತ್ ಚಂದ್ರ ಬೋಸ್ ಅವರ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿ ಅವರು ಮೇಕೆ ಹಾಲನ್ನೇ ಸೇವಿಸುತ್ತಿದ್ದರು. ಅಲ್ಲಿ ಹಾಲಿಗಾಗಿಯೇ ಎರಡು ಮೇಕೆಗಳನ್ನು ಖರೀದಿಸಲಾಗಿತ್ತು. ಹಿಂದೂಗಳ ರಕ್ಷಕನಾಗಿದ್ದ ಗಾಂಧಿ ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಮಾತೆ ಎಂದು ಪರಿಗಣಿಸುತ್ತಿದ್ದರು. ಹಿಂದೂಗಳು ಮೇಕೆ ಮಾಂಸ ಸೇವನೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೋಸ್ ಅವರ ಈ ಟ್ವೀಟ್‍ ಗೆ ಸ್ವತ: ಬಿಜೆಪಿಯೇ ವಿರೋಧ ವ್ಯಕ್ತಪಡಿಸಿದ್ದು, ಹಿರಿಯ ನಾಯಕ, ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಅವರು ಪ್ರತಿಕ್ರಿಯಿಸಿ, ಗಾಂಧೀಜಿ ಅಥವಾ ನಿಮ್ಮ ತಾತ ಮೇಕೆಯನ್ನು ಯಾವತ್ತೂ ಮಾತೆ ಎಂದು ಪರಿಗಣಿಸಿಲ್ಲ. ಸ್ವತಃ ಗಾಂಧೀಜಿಯಾಗಲೀ ಬೇರೆ ಯಾರೇ ಆಗಲಿ, ಗಾಂಧೀಜಿ ಹಿಂದೂಗಳ ರಕ್ಷಕ ಎಂದು ಬಿಂಬಿಸಿಲ್ಲ. ನಾವು ಗೋವುಗಳನ್ನು ಮಾತೆ ಎಂದು ಪರಿಗಣಿಸುತ್ತೇವೆಯೇ ಹೊರತು ಮೇಕೆಯನ್ನಲ್ಲ. ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಿದ್ದಾರೆ.

Hindus must stop eating mutton,Gandhi considered goat as mother, BJP Bengal Vice President chandra kumara bose

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ