ಎತ್ತರಿಸಿದ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ: ಪರಿಸರ ಪರಿಣಾಮ ಮೌಲ್ಯಮಾಪನ ಮಾಡಿಸಲು ಸಿಎಂ ಸೂಚನೆ

ಬೆಂಗಳೂರು, ಜುಲೈ 30: ಬೆಂಗಳೂರು ನಗರದಲ್ಲಿ ಒಟ್ಟು 102 .04 ಕಿ.ಮೀ ಉದ್ದದ ಎತ್ತರಿಸಿದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಏಕಾಂ, ಡೆಲಾಯಿಟ್ ಹಾಗೂ ಇನ್ಫ್ರಾ ಸಪೋರ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ಸಿದ್ಧಪಡಿಸಿರುವ ವಿಸ್ತøತ ಸಂಭವನೀಯ ವರದಿ (ಡೀಟೈಲ್ಡ್ ಫೀಸೆಬಿಲಿಟಿ ರಿಪೋರ್ಟ್)ಯನ್ನು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ಪಡಿಸಲಾಯಿತು.

ಬೆಂಗಳೂರಿನ ವಾಹನ ದಟ್ಟಣೆಯನ್ನು ಕಡಿತಗೊಳಿಸಲು ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೂ, ಮೆಟ್ರೋ ಯೋಜನೆಯೊಂದೇ ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾರದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಿಸಿದರು. ಪ್ರಸ್ತಾಪಿಸಲಾಗಿರುವ ಯೋಜನೆಯ ಕುರಿತಂತೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಹಾಗೂ ಪರಿಸರ ಪರಿಣಾಮ ಮೌಲ್ಯಮಾಪನ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು .

ಬೆಂಗಳೂರಿನ ವಾಹನ ದಟ್ಟಣೆಯನ್ನು ಸುಗಮಗೊಳಿಸಲು, ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಹಾಗೂ ಇಂಗಾಲ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರದಲ್ಲಿ 6 ಎತ್ತರಿಸಿದ ರಸ್ತೆಗಳ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ ಸಂಪರ್ಕ ಕಲ್ಪಿಸುವ ಷಟ್ಪಥ ಉತ್ತರ-ದಕ್ಷಿಣ ಕಾರಿಡಾರ್ -1 , ಕೆ.ಆರ್.ಪುರಂನಿಂದ ಗೊರಗುಂಟೆಪಾಳ್ಯದವರೆಗೆ (ರಾಮಮೂರ್ತಿನಗರ ರಿಂಗ್ ರಸ್ತೆಯಿಂದ ಐಟಿಪಿಎಲ್ ಮಾರ್ಗ ಸೇರಿದಂತೆ) ಷಟ್ಪಥ ಪೂರ್ವ-ಪಶ್ಚಿಮ ಕಾರಿಡಾರ್-1 , ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೆ ಪೂರ್ವ -ಪಶ್ಚಿಮ ಕಾರಿಡಾರ್ -2 , ಚತುಷ್ಪಥ ರಸ್ತೆಯುಳ್ಳ ಸಂಪರ್ಕ ಕಾರಿಡಾರ್ I , II, III ರಸ್ತೆ ನಿರ್ಮಿಸಲು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೃಹ ಹಾಗೂ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ