ಗೌರಿ ಲಂಕೇಶ್ ಹತ್ಯೆಗೆ ಪೊಲೀಸ್ ಅಧಿಕಾರಿ ಸಂಬಂಧಿ ಮನೆಯಲ್ಲಿಯೇ ಸಂಚು

ಬೆಂಗಳೂರು, ಜು.28-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಮನೆಯಲ್ಲಿ ಸಂಚು ರೂಪಿಸಲಾಗಿತ್ತು ಎಂಬ ಸತ್ಯ ಎಸ್‍ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್‍ನಲ್ಲಿ ಬಂಧನಕ್ಕೊಳಗಾಗಿರುವ ಸಿವಿಲ್ ಕಾಂಟ್ರಾಕ್ಟರ್ ಸುರೇಶ್ ಕುಮಾರ್ (36) ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಗೌರಿ ಹತ್ಯೆಗೆ ಸಂಚು ರೂಪಿಸಲಾಗಿತ್ತು.ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‍ನಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಮನೆಯನ್ನು ಸುರೇಶ್ ಬಾಡಿಗೆಗೆ ಪಡೆದುಕೊಂಡಿದ್ದ.

ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಾದ ಸುರೇಶ್ ಕುಮಾರ್ ಹಾಗೂ ಮೋಹನ್ ನಾಯಕ್ ಎಂಬವರು, ಗೌರಿ ಹತ್ಯೆಯ ಪ್ರಮುಖ ಸೂತ್ರಧಾರರು ಎನ್ನಲಾದ ಅಮೋಲ್ ಕಾಳೆ ಮತ್ತು ತಲೆಮರೆಸಿಕೊಂಡಿರುವ ನಿಹಾಲ್ ಅಲಿಯಾಸ್ ದಾದಾ ಅವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಆರೋಪಿ ಸುರೇಶ್‍ನನ್ನು ಈಗಾಗಲೇ ಎಸ್‍ಐಟಿ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಕ್ಕಾಗಿ ಕುಣಿಗಲ್ ಮತ್ತು ಮಂಗಳೂರಿಗೆ ಕರೆದೊಯ್ದಿದ್ದಾರೆ. ಗೌರಿ ಅವರಿಗೆ 2017 ಸೆಪ್ಟಂಬರ್ 5ರಂದು ಅವರ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಮುಂಭಾಗ ಆರೋಪಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಹತ್ಯೆಗೆ ಬಳಸಿದ ಪಿಸ್ತೂಲು, ಬಟ್ಟೆ, ಹೆಲ್ಮೆಟ್ ಮತ್ತು ಬೈಕನ್ನು ಸುರೇಶ್‍ಗೆ ಹಸ್ತಾಂತರಿಸಿದ್ದಾರೆ ಎಂಬುದು ತಿಳಿದುಬಂದಿದೆ.ಸುರೇಶ್ ಕುಮಾರ್ ಸಾಕ್ಷ್ಯ ನಾಶ ಮಾಡುವ ಮೂಲಕ ಗೌರಿ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಸುರೇಶ್‍ಗೆ ಗೋವಾ ಮೂಲದ ಆಶ್ರಮದೊಂದಿಗೆ ನಂಟಿತ್ತು. ಅಲ್ಲಿಗೆ ಆತ ಆಗಾಗ ಹೋಗಿಬರುತ್ತಿದ್ದ ಎಂದು ಇದೀಗ ಬೆಳಕಿಗೆ ಬಂದಿದೆ.

ಗೌರಿ ಹತ್ಯೆ ಸಂಬಂಧ ಇದುವರೆಗೆ ಬಂಧನಕ್ಕೊಳಗಾದವರ ಸಂಖ್ಯೆ 11ಕ್ಕೇರಿದೆ. ಮದ್ದೂರಿನ ಕೆ.ಟಿ.ನವೀನ್ ಕುಮಾರ್, ಶಿವಮೊಗ್ಗದ ಸುಚಿತಾ ಕುಮಾರ್, ಪುಣೆಯ ಅಮೋಲ್ ಕಾಳೆ, ಗೋವಾದ ಅಮಿತ್‍ದೇಗ್ವೇಕರ್, ವಿಜಯಪುರದ ಮನೋಹರ್ ಯಡವೆ ಮತ್ತು ಪರಶುರಾಮ್ ವಾಗ್ಮೋರೆ, ಹುಬ್ಬಳ್ಳಿಯ ಅಮಿತ್ ಬದ್ದಿ ಮತ್ತು ಗಣೇಶ್ ಮಿಸ್ಕಿನ್, ಮಡಿಕೇರಿಯ ರಾಜೇಶ್ ಡಿ.ಬಂಗೇರ, ಕುಣಿಗಲ್‍ನ ಸುರೇಶ್ ಕುಮಾರ್ ಬಂಧಿತರು.

Gauri Lankesh murder case,SIT,Suresh Kumar,Killing Sketch

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ