ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ಆದಿ ಚುಂಚನಗಿರಿ ಮಠ ಮಾದರಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಜು-೨೬:ಧರ್ಮ‌ ಉಳಿವಿಗೆ ಶ್ರೀ ಆದಿಚುಂಚನಗಿರಿಯಂಥ ಸಂಸ್ಥಾನ ಮಠಗಳ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ನಾಗಮಂಗಲದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಗುರು ಪೂರ್ಣಿಮಾ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ 22ನೇ ರಾಜ್ಯಮಟ್ಟದ ಚುಂಚಾದ್ರಿ ಕಲೋತ್ಸವ -2018 ರಲ್ಲಿ ಪಾಲ್ಗೊಂಡು ಮಾತನಾಡಿದರು.

ಧರ್ಮದ ಜೊತೆಗೆ ಶಿಕ್ಷಣಕ್ಕೆ ಪ್ರಥಮ‌ ಆದ್ಯತೆ ನೀಡಿ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ದಾನ ಮಾಡುತ್ತಿದ್ದಾರೆ. ನಳಂದ ಶಿಕ್ಷಣ ಸಂಸ್ಥೆ ಬಗ್ಗೆ ಇರುವ ಗೌರವ, ಪ್ರತಿಷ್ಠೆಯಂತೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥಾನವೂ ಇತಿಹಾಸ ನಿರ್ಮಿಸಲಿದೆ ಎಂದರು.

ನಮ್ಮ‌ ದೇಶದಲ್ಲಿ ಪದವೀಧರರ ಕೊರತೆ ಇಲ್ಲ. ಆದರೆ ಈ‌ ದೇಶಕ್ಕೆ ಉತ್ತಮ ಪ್ರಜೆಗಳ ಅಗತ್ಯವಿದೆ.

ಭಾರತ ಇಡೀ‌ ಪ್ರಪಂಚಕ್ಕೆ ಮಾನವ ಸಂಪತ್ತನ್ನು‌ ನೀಡಿದೆ. ಎಲ್ಲಾ ದೇಶದಲ್ಲೂ ನಮ್ಮ ಇಂಜಿನಿಯರ್ಸ್, ವೈದ್ಯರು, ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

ಕೇವಲ ೨೦೦ ವರ್ಷದ ಇತಿಹಾಸ ಇರುವ ಅಮೆರಿಕಾಗೆ ನಾವು ಹೋಲಿಕೆ ಮಾಡಿಕೊಳ್ಳುತ್ತಿದ್ದೇವೆ.‌ ನಮ್ಮಲ್ಲಿರುವ ಕೀಳು ಭಾವನೆ ತ್ಯಜಿಸಿ, ಈ ದೇಶದಲ್ಲಿನ ಸಂಪತ್ತನ್ನು ಸೂಕ್ತ ರೀತಿ ಬಳಸಿಕೊಂಡರೆ, ಅಮೆರಿಕವನ್ನೇ ಮೆಟ್ಟಿ‌ ನಿಲ್ಲಬಹುದು‌ ಎಂದರು.

ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಸಾಧನೆ ಮಾಡುವತ್ತ ಗಮನ ಹರಿಸಿ, ನಿಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಉಜ್ವಲಗೊಳಿಸಿ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಟ ರಮೇಶ್ ಅರವಿಂದ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ಸುರೇಶ್ ಗೌಡ ಉಪಸ್ಥಿತರಿದ್ದರು.

Adichunchanagiri,sri Guru Poornima Mahotsav,Dr.G.Parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ