ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರ ಬದಲಾವಣೆ

ಬೆಂಗಳೂರು, ಜು.25-ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನು ನಿಯಮಾನುಸಾರ ಬದಲಾವಣೆ ಮಾಡಲಾಗುತ್ತಿದ್ದು, ಜೆಡಿಎಸ್ ಬೆಂಬಲಿತ ಸದಸ್ಯರನ್ನು ನೇಮಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಪ್ರಸ್ತುತ ಸಾಲಿನ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ನೇಮಿಸಲಾದ ಸಿಂಡಿಕೇಟ್‍ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿದ್ದಾರೆ. ಹೀಗಾಗಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಯಾವುದೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ತಮ್ಮ ಪಕ್ಷದ ಸದಸ್ಯರಿಗೂ ಅವಕಾಶ ಕಲ್ಪಿಸುವುದು ಸಾಮಾನ್ಯ. ಅದರಂತೆ ಸಿಂಡಿಕೇಟ್‍ಗಳನ್ನು ಪುನರ್ ರಚನೆ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಹೊಸದಾಗಿ ನೇಮಿಸಲಾಗುವುದು ಎಂದರು.

ಈ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂಡಿಕೇಟ್ ಸಮಿತಿಗಳನ್ನು ಬದಲಾವಣೆ ಮಾಡಬಾರದು ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್‍ನ ಒತ್ತಡವನ್ನು ತಳ್ಳಿ ಹಾಕಿ ಹಳೆಯ ಸಮಿತಿಗಳನ್ನು ವಿಸರ್ಜಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿ.ಟಿ.ದೇವೇಗೌಡ ಅವರು, ಶೀಘ್ರವೇ ಹೊಸ ಸಮಿತಿಗಳನ್ನು ರಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಸೌಲಭ್ಯದಲ್ಲಿರುವ ಗೊಂದಲಗಳು ಇನ್ನೆರಡು ದಿನಗಳಲ್ಲಿ ಬಗೆಹರಿಯಲಿವೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಚರ್ಚೆ ನಡೆಸಿ ಶೀಘ್ರವೇ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ, ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುವುದನ್ನು ನಿಲ್ಲಿಸಲಿ ಎಂದರು.

ವಿಧಾನಸೌಧಕ್ಕೆ ಮಾಧ್ಯಮದವರನ್ನು ನಿರ್ಬಂಧಿಸುವುದಾಗಿ ಕುಮಾರಸ್ವಾಮಿ ಅವರು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

Changes of members of university syndicate,Higher Education Minister GT Deve Gowda

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ