ಮಹದಾಯಿ ವಿಚಾರ: ಕರ್ನಾಟಕ ಕಾನೂನು ಚೌಕಟ್ಟಿನಲ್ಲಿದೆ: ಸಚಿವ ಡಿ.ಕೆ.ಶಿ

ಬೆಂಗಳೂರು, ಜು.25- ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಕಾನೂನು ಚೌಕಟ್ಟಿನಲ್ಲಿದ್ದು, ಗೋವಾ ರಾಜ್ಯದ ಜತೆ ಯುದ್ಧ ಅಥವಾ ಜಗಳ ಮಾಡಲು ಸಿದ್ಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್‍ನಲ್ಲಿ ಮಹದಾಯಿ ನ್ಯಾಯಾಧೀಕರಣದ ತೀರ್ಪು ಪ್ರಕಟವಾಗಲಿದ್ದು, ನ್ಯಾಯಬದ್ಧ ತೀರ್ಪು ಬರಲಿದೆ ಎಂಬ ನಂಬಿಕೆ ಇದೆ ಎಂದರು.

ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲಾಗಿದೆ ಎಂಬ ಗೋವಾ ಸರ್ಕಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ನೀರು ಸೋರಿಕೆಯಾಗಿರುವುದು ಗಮನಕ್ಕೆ ಬಂದಿದ್ದು, ಅದನ್ನು ಈಗಾಗಲೇ ದಾಖಲೆ ಸಹಿತ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಗೋವಾ ರಾಜ್ಯ ಬಳಸಿಕೊಳ್ಳಲು ತಮ್ಮ ತಕರಾರಿಲ್ಲ. ನಮ್ಮ ಜನರಿಗೆ ಅಗತ್ಯವಿರುವಷ್ಟು ನೀರು ಸಿಗಬೇಕೆಂಬ ಬೇಡಿಕೆ ಇದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಸಿಗಬೇಕು. ಆ ಭಾಗದ ಜನರಿಗೆ ನೀರನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಅಗತ್ಯ ಬಿದ್ದರೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿ ಎಂದು ನಮ್ಮ ವಕೀಲರು ಹೇಳಿದ್ದಾರೆ. ಕೋರ್ಟ್ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ರಾಹುಲ್‍ಗಾಂಧಿ ಪ್ರಧಾನಿ ಆಗಬೇಕು:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಮುಂದಿನ ಪ್ರಧಾನಿ ಆಗಬೇಕು. ರಾಹುಲ್‍ಗಾಂಧಿ ಅವರು ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿಕೆ ನೀಡಿರಬಹುದು. ಆದರೆ, ಅವರೇ ನಮ್ಮ ನಾಯಕರು. ನಮ್ಮ ಪಕ್ಷದ ತೀರ್ಮಾನದಂತೆ ರಾಹುಲ್‍ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ. ದೇಶದ ಹಿತದೃಷ್ಟಿಯಿಂದ ರಾಹುಲ್‍ಗಾಂಧಿ ಅವರ ಕುಟುಂಬ ತ್ಯಾಗ ಮಾಡಿಕೊಂಡು ಬಂದಿದೆ. ಬಿಜೆಪಿ ಸೋಲಿಸುವ ಉದ್ದೇಶದಿಂದ ಎಲ್ಲರೂ ಒಗ್ಗೂಡಬೇಕೆಂದು ಹೇಳಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಪ್ರಧಾನಿ ಆಗುವ ಅವಕಾಶವಿತ್ತು. ಆದರೂ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಗೆಲ್ಲುವುದೇ ನಮ್ಮ ಪಕ್ಷದ ಗುರಿ ಎಂದರು.

ರೈತರ ಆತ್ಮಹತ್ಯೆ ನಿಲ್ಲಬೇಕು. ವೈಯಕ್ತಿಕ ವಿಚಾರವೇ ಆಗಿರಲಿ, ಬೆಳೆ ಸಮಸ್ಯೆಯೇ ಆಗಿರಲಿ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಚಿವರು ಮನವಿ ಮಾಡಿದರು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದ ನಂತರವೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವೈಯಕ್ತಿಕ ವಿಚಾರಗಳಿಗೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಸಾಲ ಮನ್ನಾ ವಿಚಾರದಲ್ಲಿದ್ದ ಅನುಮಾನಗಳನ್ನು ಬಗೆಹರಿಸಲು ನಿನ್ನೆ ಬ್ಯಾಂಕ್‍ಗಳ ಜತೆ ಸಭೆ ನಡೆಸಲಾಗಿದೆ. ಸರ್ಕಾರ ಸುಮ್ಮನೆ ಕುಳಿತಿಲ್ಲ. ಯಾವುದೇ ಸಮಸ್ಯೆಯಿಂದ ರೈತರು ಮೃತಪಟ್ಟರೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

Mahadevi river water distribution,Karnataka law framework,not ready to fight with Goa state,DK Shivakumar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ